2007 ರಲ್ಲಿ ಉತ್ತರ ಕರ್ನಾಟಕದಿಂದ ಚಂದನವನಕ್ಕೆ ಕಾಲಿಟ್ಟ ಎ ಎಂ ನೀಲ್, ಸುಮಾರು 22 ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಇವರ ಪ್ರತಿಭೆಗೆ ಬಾಲಿವುಡ್ನಲ್ಲಿ ಬೇಡಿಕೆ ಬಂದಿದೆ. ಹಾಗಾಗಿ ಅಲ್ಲಿಯೂ ಸಂಗೀತ ನೀಡಲು ಸಜ್ಜಾಗಿದ್ದಾರೆ.
ಮುಸ್ಸಂಜೆಯ ಗೆಳತಿ, ವೆಂಕಿ, ತಬ್ಬಲಿ, ನೆನೆಯುವೆ ನಿನ್ನ, ಅಚ್ಚುಮೆಚ್ಚು, ಮನಸಿನ ಮಾತು, ಕಾಲಾಯ ತಸ್ಮೈ ನಮಃ, ಸನಿಹ, ಮನನಡಿ, ಪರಿಣಯ, ನೆನಪಿದೆಯಾ, ಆತ್ಮಸಾಕ್ಷಿ, 7, ಎರಡೊಂದ್ಲ ಮೂರು ಹಾಗೂ ಇತ್ತೀಚಿನ ‘ಭಾನು ವೆಡ್ಸ್ ಭೂಮಿ’ ಸಿನಿಮಾಗಳಿಗೆ ಸಂಗೀತ ನೀಡಿದ ಈ ಉತ್ತರ ಕರ್ನಾಟಕ ಪ್ರತಿಭೆ ‘ಜಶ್ ನೇ ಇಶ್ಕ್’ ಎಂಬ ಹಿಂದಿ ಸಿನಿಮಾಗೆ ಸಂಗೀತ ನೀಡಿಲಿದ್ದಾರೆ. ಎರಡು ಹಿಂದಿ ಆಲ್ಬಂಬ್ಗಳಿಗೆ ಸಂಗೀತ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದರ ಜೊತೆಗೆ ಮತ್ತೊಂದು ಹೆಸರಿಡದ ಸಿನಿಮಾಗೂ ಸಹ ಇವರೇ ಗಿಟಾರು ನುಡಿಸಲಿದ್ದಾರಂತೆ.
ಮುಂಬೈನಲ್ಲಿ ರೋಹಿತ್ ಎಂಬುವರ ಜೊತೆ ಸುಮಾರು ಎರಡೂವರೆ ವರ್ಷ ಕೆಲಸ ಮಾಡಿದ್ದೇ ಇವರಿಗೆ ಬಾಲಿವುಡ್ನಿಂದ ಬುಲಾವ್ ಬರಲು ಕಾರಣವಂತೆ. ಹಾಗಾಗಿ ನೀಲ್, ನನ್ನ ಜೀವನದಲ್ಲಿ ಇದು ಬಹು ದೊಡ್ಡ ಒಪೆನಿಂಗ್ ಎಂದು ಹೇಳಿಕೊಂಡಿದ್ದಾರೆ.
‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೂ ಇವರೇ ಸಂಗೀತ ನೀಡಿದ್ದು, ನಿನ್ನೆ ಸಿನಿಮಾ ಹಾಡುಗಳ ಬಿಡುಗಡೆ ಮಾಡಲಾಯ್ತು. ಈ ವೇಳೆ ವೇದಿಕೆ ಹತ್ತಲು ಹಿಂದೇಟು ಹಾಕಿದಾಗ ಹಿರಿಯ ನಟ ಶೋಭರಾಜ್ ಬಲವಂತ ಮಾಡಿ ನೀಲ್ ಅವರನ್ನು ವೇದಿಕೆಗೆ ಕರೆತಂದರು. ಈ ಚಿತ್ರಕ್ಕೆ ನೀಲ್ ಹಿರಿಯ ನಟ ರಂಗಾಯಣ ರಘು ಅವರಿಂದ ಒಂದು ಹಾಡು ಸಹ ಹಾಡಿಸಿದ್ದಾರೆ. ಈ ಹಾಡಿಗೆ ಶೋಭರಾಜ್ ಸ್ಟೆಪ್ ಸಹ ಹಾಕಿದ್ದಾರಂತೆ. ನೀಲ್ ಈಗ ಕನ್ನಡದಲ್ಲಿ ಓಂ ಸಾಯಿಪ್ರಕಾಶ್ ಅವರ ‘ಜಗ್ಗಿ ಜಗನ್ನಾಥ್’ ಸಿನಿಮಾಕ್ಕೂ ಸಹ ಸಂಗೀತ ನೀಡಲು ಸಜ್ಜಾಗಿದ್ದಾರೆ.