ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ 'ಮತ್ತೆ ವಸಂತ' ದಲ್ಲಿ ನಾಯಕ ವಸಂತನಾಗಿ ನಟಿಸುತ್ತಿರುವ ವಿವೇಕ್ ಸಿಂಹ ಅವರಿಗೆ ಬಣ್ಣದ ಲೋಕ ಹೊಸತೇನಲ್ಲ. ಇದಕ್ಕೂ ಮುನ್ನ 'ಸೌಭಾಗ್ಯವತಿ' ಧಾರಾವಾಹಿಯಲ್ಲಿ ನಟಿಸಿರುವ ವಿವೇಕ್ ಸಿಂಹ ಇದುವರೆಗೂ ನಟಿಸಿರುವುದು ಮೂರು ಧಾರಾವಾಹಿಗಳಾದರೂ ಸಾಕಷ್ಟು ಅನುಭವವುಳ್ಳ ನಟನಂತೆ ಕಾಣುತ್ತಾರೆ.
'ಜನುಮದ ಜೋಡಿ' ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದ ವಿವೇಕ್ ಸಿಂಹ ನಂತರ 'ಮಹಾದೇವಿ'ಯಲ್ಲಿ ಸೂರ್ಯ ಎಂಬ ರಗಡ್ ಲುಕ್ಗೂ ಜೀವ ತುಂಬಿದರು. ಅಲ್ಲೂ ಕೂಡಾ ಪ್ರೇಕ್ಷಕ ಪ್ರಭುಗಳು ಇವರನ್ನು ಸ್ವಾಗತಿಸಿದರು. ಕಾಲೇಜು ದಿನಗಳಿಂದಲೂ ಡೊಳ್ಳು ಕುಣಿತ, ವೀರಗಾಸೆ, ನಾಟಕ ಸೇರಿ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ವಿವೇಕ್ ಸಿಂಹ ಅವರಿಗೆ ಯಾವಾಗ ನಟನೆಯಲ್ಲಿ ಆಸಕ್ತಿ ಮೂಡಿತೋ ಆಗ ರಾಜುಗುರು ಹೊಸಕೋಟೆ ಅವರ ಬಳಿ ನಟನೆ ಬಗ್ಗೆ ತಿಳಿದುಕೊಂಡರು. ಕ್ರಮೇಣ ನಟನೆಯ ರೀತಿ ನೀತಿಗಳನ್ನು ಆಳವಾಗಿ ಕಲಿಯುವ ಉದ್ದೇಶದಿಂದ ರಂಗಾಯಣ ಸೇರಿದ ವಿವೇಕ್ ಕೆಲವೇ ದಿನಗಳಲ್ಲಿ ನಟನೆಯಲ್ಲಿ ಪಳಗಿದರು.
ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ವಿವೇಕ್ ಸಿಂಹ ಶ್ರುತಿ ನಾಯ್ಡು ನಿರ್ದೇಶನದ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಮಗನಾಗಿ ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಡ್ಯಾನ್ಸರ್ ಕೂಡಾ ಆಗಿರುವ ವಿವೇಕ್ ಸಿಂಹ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ನಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲ ಪ್ರತಿ ವಾರವೂ ವಿಭಿನ್ನ ರೀತಿಯ ಕಾನ್ಸೆಪ್ಟ್ ಗೆ ಹೆಜ್ಜೆ ಹಾಕುತ್ತಿದ್ದ ವಿವೇಕ್ ಸಿಂಹ, ತೀರ್ಪುಗಾರರ ಜೊತೆಗೆ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ನಟನೆ ಎಂಬುದು ಕೇವಲ ಒಂದು ದಿನದಲ್ಲಿ ಕಲಿಯುವುದಲ್ಲ. ಆ್ಯಕ್ಟಿಂಗ್ನಲ್ಲಿ ಪ್ರತಿದಿನವೂ ಕಲಿಯುವುದು ಇರುತ್ತದೆ. ನಾನು ಇನ್ನು ಕೂಡಾ ವಿದ್ಯಾರ್ಥಿ, ಎನ್ನುವ ವಿವೇಕ್ ಸಿಂಹ ನಟನೆಗೆ ಬೆಳ್ಳಿತೆರೆಯಾಗಬೇಕು, ಕಿರುತೆರೆ ಆಗಬೇಕು ಎಂಬ ಮಾನದಂಡವಿರಬಾರದು, ಒಳ್ಳೆಯ ನಟ ಎಂದು ಗುರುತಿಸಿಕೊಂಡರೆ ಸಾಕು ಎನ್ನುತ್ತಾರೆ.