ಕಿರುತೆರೆ ಮೂಲಕ ಬಣ್ಣದ ಪಯಣ ಆರಂಭಿಸಿದ ಹಲವರು ಇಂದು ಬೆಳ್ಳಿತೆರೆಯಲ್ಲಿ ಕೂಡಾ ಮಿಂಚುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಶರಣ್ಯಾ ಶೆಟ್ಟಿ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಖಳನಾಯಕಿ ಸಾಹಿತ್ಯ ಆಗಿ ಕಿರುತೆರೆಗೆ ಕಾಲಿಟ್ಟ ಶರಣ್ಯಾ ಶೆಟ್ಟಿ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಅಕ್ಷಿತ್ ಶಶಿಕುಮಾರ್ ಅಭಿನಯದ 'ಓ ಮೈ ಲವ್' ಚಿತ್ರದ ಭರ್ಜರಿ ಫೋಟೋಶೂಟ್
ಗಟ್ಟಿಮೇಳ ಧಾರಾವಾಹಿಯಿಂದ ಹೊರಬಂದ ಬಳಿಕ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದ ಶರಣ್ಯಾ ಶೆಟ್ಟಿ ಸೀದಾ ಹಾರಿದ್ದು ಹಿರಿತೆರೆಗೆ. ಹೆಚ್. ಕೆ. ಪ್ರಕಾಶ್ ನಿರ್ದೇಶನದ 'ಸ್ಫೂಕಿ ಕಾಲೇಜು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಶರಣ್ಯಾಗೆ ಬೆಳ್ಳಿತೆರೆಯಿಂದ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಸ್ಫೂಕಿ ಕಾಲೇಜು ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿರುವ ಶರಣ್ಯಾ ಶೆಟ್ಟಿ, ಕೃಷ್ಣ ಹೊಳ್ಳ ನಿರ್ದೇಶನದ '31 ಡೇಸ್' ಸಿನಿಮಾದಲ್ಲಿ ನಾಯಕಿಯಾಗಿ ಕೂಡಾ ಅಭಿನಯಿಸಲಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ರಾಜ್ ಕಿರಣ್ ನಿರ್ದೇಶನದ ಮೊದಲ ಚಿತ್ರ '1980' ಸಿನಿಮಾವೊಂದರಲ್ಲಿ ಕೂಡಾ ಶರಣ್ಯಾ ಬಣ್ಣ ಹಚ್ಚಿದ್ದಾರೆ. ಪಿರಿಯಾಡಿಕಲ್ ಕಥೆ ಹೊಂದಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ 18 ವರ್ಷದ ಹುಡುಗಿಯ ಪಾತ್ರದಲ್ಲಿ ಶರಣ್ಯಾ ಕಾಣಿಸಿಕೊಳ್ಳಲಿದ್ದಾರೆ. ನಟನೆಯ ಜೊತೆಗೆ ಓದನ್ನು ಕೂಡಾ ಜೊತೆಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿರುವ ಶರಣ್ಯಾ ಇಂಜಿನಿಯರಿಂಗ್ ಕೊನೆಯ ವರ್ಷದ ಪರೀಕ್ಷೆ ಬರೆಯಬೇಕಾಗಿದೆ. ಹೀಗೆ ಒಂದರ ಮೇಲೆ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶರಣ್ಯಾ ಕಿರುತೆರೆಯಲ್ಲಿ ಕೂಡಾ ನಟಿಸುತ್ತಾರಂತೆ.