ಒಂದಾನೊಂದು ಕಾಲದಲ್ಲಿ ತುಳು ಸಿನಿಮಾಗಳು ಬೆರಳೆಣಿಕೆಯಷ್ಟು ತಯಾರಾಗುತ್ತಿದ್ದವು. ಇಂದು ಇವುಗಳ ಸಂಖ್ಯೆ ವರ್ಷಕ್ಕೆ 40 ರಿಂದ 50 ಆಗಿರುವುದು ಸಂತೋಷದ ವಿಚಾರ. ಈ ಸಂತೋಷಕ್ಕೆ ಇನ್ನೊಂದು ದೊಡ್ಡ ಮೆಟ್ಟಿಲು ಕಟ್ಟಿ ಕೊಟ್ಟಿದೆ ‘ಕಟಪಾಡಿ ಕಟ್ಟಪ್ಪ’ ಸಿನಿಮಾ.
ಇದೆ 29 ರಂದು ಈ ಸಿನಿಮಾ 200 ಪರದೆಗಳ ಮೇಲೆ ದೇಶ ವಿದೇಶದಲ್ಲಿ ತೆರೆ ಕಾಣುತ್ತಿರುವುದು ಹೆಗ್ಗಳಿಕೆ ವಿಚಾರ. ಶ್ರೀಲಂಕಾ, ಸಿಂಗಾಪುರ, ಮಲೇಶಿಯಾ, ದುಬೈ, ಅಬುದಾಬಿ, ಶಾರ್ಜಾ, ಬಹರೇನ್, ನವದೆಹಲಿ, ಸೂರತ್, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಹೈದರಾಬಾದ್, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ಸಹಿತ ಹೊರರಾಜ್ಯಗಳಲ್ಲಿಯೂ ರಿಲೀಸ್ ಆಗಲಿದೆ. ಕರ್ನಾಟಕದ ಮೂವತ್ತೂ ಜಿಲ್ಲೆಗಳಲ್ಲಿ ಬಿಡುಗಡೆ ಕಾಣಲಿರುವ ಈ ಚಿತ್ರ ಬೆಂಗಳೂರಿನ 24 ಸೆಂಟರ್‌ಗಳಲ್ಲಿ ರಿಲೀಸ್ ಮಾಡಲು ಸಿನೆಮಾ ತಂಡ ನಿರ್ಧರಿಸಿದೆ. ಬೆಂಗಳೂರಿನಲ್ಲಿ ತುಳು ಚಿತ್ರವೊಂದು ಇಷ್ಟೊಂದು ಥೀಯೇಟರ್‍ಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.
ಬ್ರಹ್ಮಾವರ್ ಮೂವೀಸ್ ಲಾಂಛನದಲ್ಲಿ ಮೂಡಿಬಂದಿರುವ 'ಕಟಪಾಡಿ ಕಟ್ಟಪ್ಪ' ಚಿತ್ರಕ್ಕೆ ರಾಜೇಶ್ ಬ್ರಹ್ಮಾವರ್ ನಿರ್ಮಾಪಕರು. ಇವರು ಕನ್ನಡ ಸಿನಿಮಾ ರಂಗದಲ್ಲಿ ನೃತ್ಯ ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಛಾಯಾಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದಾರೆ.
ಗಣೇಶ್ ನೀರ್ಚಾಲ್ ಸಂಕಲನ, ಪ್ರಕಾಶ್‌ಸಂಗೀತನೀಡಿದ್ದಾರೆ. ಜತೆಗೆ ತುಳುರಂಗ ಭೂಮಿಯ ದಿಗ್ಗಜರ ದಂಡು ಚಿತ್ರದಲ್ಲಿ ಅಭಿನಯಿಸಿದೆ. ಪ್ರಥಮ ಬಾರಿಗೆ ಉದಯ ಪೂಜಾರಿ ಬಳ್ಳಾಲ್‌ಬಾಗ್ ನಾಯಕ ನಟರಾಗಿ, ಚರೀಷ್ಮಾ ಆಮೀನ್ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಜ್ಞೇಶ್ವರ್ ಬರ್ಕೆ, ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಪಮ್ಮಿ ಕೊಡಿಯಾಲ್‌ಬೈಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ ಪಾಣಾಜೆ, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ಪ್ರಶಾಂತ್ ಅಂಚನ್ ಸಹಿತ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.