ಬೆಂಗಳೂರು: ಅಭಿಮಾನಿಗಳ ಅಪೇಕ್ಷೆಯಂತೆ ಈ ಬಾರಿ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಆಗಮಿಸುತ್ತಿದ್ದಾರೆ.
ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸೀಸನ್ನಿಂದಲೂ ಇವರನ್ನು ಸಾಧಕರ ಸೀಟಿನ ಮೇಲೆ ನೋಡುವ ಬಯಕೆ ವೀಕ್ಷಕರದಾಗಿತ್ತು. ಆದರೆ, ಕನ್ನಡಿಗರ ಈ ಕನಸು ಈಡೇರಲು ನಾಲ್ಕು ಸೀಸನ್ ಕಾಯಬೇಕಾಯಿತು. ಈ ಬಾರಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ವೀಕೆಂಡ್ ಟೆಂಟ್ನಲ್ಲಿ ಕಾಣಿಸಿಕೊಳ್ಳುವ ಅಮೃತ ಘಳಿಗೆ ಕೊನೆಗೂ ಬಂದಿದೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಜನಿಸಿದ ನಾಗವಾರ ರಾಮರಾವ್ ನಾರಾಯಣಮೂರ್ತಿ, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್ ಪದವಿ ಪಡೆದು, ಕಾನ್ಪುರ ಐಐಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು 1981ರಲ್ಲಿ ಐವರೊಂದಿಗೆ ಸೇರಿ ಕೇವಲ 10 ಸಾವಿರ ರೂಪಾಯಿ ಬಂಡವಾಳ ಹೂಡಿ ಬೆಂಗಳೂರಿನಲ್ಲಿ ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿದರು. ಇವರು 20 ವರ್ಷ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದೀಗ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹಾಗೂ ಹಿತಚಿಂತಕರಾಗಿದ್ದಾರೆ.
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ನಾರಾಯಣ ಮೂರ್ತಿ ಅವರು, ತಮ್ಮ ಯಶಸ್ಸಿನ ಪಯಣವನ್ನು ಎಳೆ ಎಳೆಯಾಗಿ ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಹಾಗೂ ಸಂಸಾರಿಕ ಜೀವನದಲ್ಲಿ ಅವರ ಹೆಜ್ಜೆಗೆ ಹೆಜ್ಜೆಯಾದ ಪತ್ನಿ ಸುಧಾಮೂರ್ತಿ, ಮಕ್ಕಳು, ಸಹ ಸಂಸ್ಥಾಪಕರು, ಕಾಲೇಜಿನ ಗೆಳೆಯರು, ಕುಟುಂಬ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಅವರೊಂದಿಗಿನ ಒಡನಾಟ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಅವರ ಸಂಚಿಕೆಯ ಒಂದು ಸಣ್ಣ ಪ್ರೋಮೋ ಜೀ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಜೂನ್ 1ರಂದು ಕಾರ್ಯಕ್ರಮ ಪ್ರಸಾರವಾಗಲಿದೆ. ಮರುದಿನ (ಜೂನ್ 2) ರಂದು ಸುಧಾ ಮೂರ್ತಿ ಅವರ ಜೀವನಗಾಥೆ ವಿಕೇಂಡ್ ಟೆಂಟ್ನಲ್ಲಿ ಅನಾವರಣಗೊಳ್ಳಲಿದೆ.