ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರೆಲ್ಲ ಸಭೆ ಸೇರಿ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದ್ದರು. ಆದರೆ, ಇದೀಗ ತಮ್ಮ ನಿರ್ಧಾರ ಹಿಂಪಡೆದುಕೊಂಡಿದ್ದು ಚಿತ್ರಮಂದಿರಗಳಲ್ಲೇ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಹೌದು, ಕಳೆದ ಕೆಲ ದಿನಗಳ ಹಿಂದೆ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರು ಸಭೆ ಸೇರಿ, ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಯೋಚಿಸಿದ್ದರು. ಆದರೆ, ಇದೀಗ ಒಬ್ಬೊಬ್ಬರೇ ಉಲ್ಟಾ ಹೊಡೆದಿದ್ದಾರೆ. ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್‍ನ ವಿಜಯ್‍ಕುಮಾರ್ ಕಿರಗಂದೂರು ಈಗಾಗಲೇ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ ನಿರ್ಮಾಪಕ ಸೂರಪ್ಪ ಬಾಬು ಅವರು ಏಪ್ರಿಲ್ 23 ರಂದು ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದೀಗ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರ ಸಹ ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ದೊಡ್ಡ ಬಜೆಟ್‍ನ ಮತ್ತು ದೊಡ್ಡ ಸ್ಟಾರ್ಗಳು ನಟಿಸಿರುವ ಸಿನಿಮಾಗಳು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿವೆ.
ಇನ್ನು ಬಿಗ್ ಬಜೆಟ್ ಚಿತ್ರವಾಗಲಿ ಅಥವಾ ಸಣ್ಣ ಬಜೆಟ್‍ನ ಚಿತ್ರವೇ ಆಗಲಿ ಯಾವ ಚಿತ್ರವನ್ನಾದರೂ ಪರ್ಸಂಟೇಜ್ ವ್ಯವಸ್ಥೆಯಡಿ ಬಿಡುಗಡೆ ಮಾಡುವುದಾಗಿ ಚಿತ್ರಮಂದಿರದವರು ಹೇಳುತ್ತಿದ್ದಾರೆ. ಆದರೆ, ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಇನ್ನೂ ಒಂದು ತಿಂಗಳ ಸಮಯ ಹಿಡಿಯಲಿದ್ದು, ಎಲ್ಲ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ.