ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು, ಹಿಂದೂಗಳು ತಮ್ಮ ಮನೆಗಳಲ್ಲಿ ಆಚರಿಸುವ ಹಬ್ಬ ಪಿತೃ ಪಕ್ಷ. ಸೆಪ್ಟೆಂಬರ್ ತಿಂಗಳಲ್ಲಿ ಬರುವ ಈ ಪಿತೃ ಪಕ್ಷ ಹಬ್ಬ ಅಮಾವಾಸ್ಯೆ ಮುಗಿಯುವುದಕ್ಕಿಂತ ಮುಂಚೆ ಕುಟುಂಬದ ಹಿರಿಯರಿಗೆ, ಅವರಿಗೆ ಇಷ್ಟವಾದ ಊಟ, ತಿಂಡಿ ತಿನಿಸುಗಳನ್ನ ಇಟ್ಟು ಧೂಪ ಹಾಕುವ ಮೂಲಕ ಸಾವನ್ನಪ್ಪಿರುವ ಹಿರಿಯರಿಗೆ ಪೂಜೆ ಸಲ್ಲಿಸುವುದು ಪದ್ಧತಿ.
ಆದರೆ, ಕನ್ನಡ ಚಿತ್ರರಂಗದ ಮೇರು ನಟ, ನಟ ಸಾರ್ವಭೌಮ ಡಾ. ರಾಜ್ಕುಮಾರ್ಗೆ, ಅವರ ಅಪ್ಪಟ ಅಭಿಮಾನಿಗಳು ಪಿತೃ ಪಕ್ಷ ಹಬ್ಬವನ್ನ ಆಚರಿಸಿದ್ದಾರೆ. ಡಾ. ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಗಜ ಎಂಬ ಅಭಿಮಾನಿ, ಶ್ರೀಮುತ್ತು ಡಾ. ಶಿವರಾಜ್ ಕುಮಾರ್ ಯುವ ವೇದಿಕೆ ಸಹಯೋಗದೊಂದಿಗೆ ಡಾ. ರಾಜ್ ಕುಮಾರ್ ಅವರಿಗೆ ಪಿತೃ ಪಕ್ಷ ಹಬ್ಬವನ್ನ ಆಚರಿಸಿದ್ದಾರೆ.
ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಇರುವ ಡಾ. ರಾಜ್‌ಕುಮಾರ್ ಪುತ್ಥಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಕುಟುಂಬದವರಂತೆ ಅಣ್ಣಾವ್ರಿಗೆ ಪಿತೃಪಕ್ಷ ಪೂಜೆ ಮಾಡಿದ್ದಾರೆ. ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಹಾಗೂ ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ, ಅಭಿಮಾನಿಗಳು ಹಮ್ಮಿಕೊಂಡಿದ್ದ ಪಿತೃಪಕ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ.
ಶ್ರೀಮುತ್ತು ಡಾ.ಶಿವರಾಜ್ ಕುಮಾರ್ ಯುವ ವೇದಿಕೆಯ ಅಧ್ಯಕ್ಷ ಗಜ ಹೇಳುವ ಹಾಗೆ, ಕಳೆದ ಎರಡು ವರ್ಷದಿಂದ, ನಾವು ಅಣ್ಣಾವ್ರಿಗೆ ಪಿತೃಪಕ್ಷ ಪೂಜೆಯನ್ನ ಮಾಡುತ್ತಿದ್ದೇವೆ. ವಿಶೇಷವಾಗಿ 101 ಬಗೆಯ ತಿಂಡಿ ತಿನಿಸುಗಳನ್ನ ಮಾಡಿ, ಅಣ್ಣಾವ್ರ ಪುತ್ಥಳಿ ಮುಂದೆ ಇಟ್ಟು ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೇ 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ನಾನು 20ನೇ ವಯಸ್ಸಿನಿಂದ ಡಾ.ರಾಜ್ ಕುಮಾರ್ ಅಭಿಮಾನಿಯಾಗಿದ್ದೆ. ಅಣ್ಣಾವ್ರ ನಿಧನದ ಬಳಿಕ ನಾನು ಶಿವರಾಜ್ ಕುಮಾರ್ ಅಭಿಮಾನಿಯಾಗಿ ಇದ್ದೇನೆ. ಈ ಪ್ರೀತಿ, ವಿಶ್ವಾಸದಿಂದ ನಾವು ಅಣ್ಣಾವ್ರಿಗೆ ಪಿತೃಪಕ್ಷ ಹಬ್ಬವನ್ನ ಮಾಡುತ್ತಿದ್ದೇವೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಒಬ್ಬ ನಟನಿಗೆ ಈ ರೀತಿಯ ಪಿತೃಪಕ್ಷ ಹಬ್ಬ ಮಾಡುತ್ತಿರುವುದು ಇದೇ ಮೊದಲು ಎಂದರು.
ಡಾ.ರಾಜ್ ಕುಮಾರ್ ನಮ್ಮನೆಲ್ಲ ಅಗಲಿ 15 ವರ್ಷ ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳಿದಿದ್ದಾರೆ ಎಂಬುವುದಕ್ಕೆ ಅಭಿಮಾನಿಗಳು ಸೇರಿ ನೆಚ್ಚಿನ ನಟನಿಗೆ ಈ ಪಿತೃಪಕ್ಷ ಹಬ್ಬವನ್ನ ಆಚರಿಸಿರುವುದೇ ಸಾಕ್ಷಿ.
ಇದನ್ನೂ ಓದಿ:ಪವರ್ ಸ್ಟಾರ್ 'ಜೇಮ್ಸ್' ಚಿತ್ರದ ಸ್ಯಾಟ್ಲೈಟ್ ಹಕ್ಕು 15 ಕೋಟಿಗೆ ಮಾರಾಟ?