ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಾರರ್ ಧಾರಾವಾಹಿ 'ಯಾರೇ ನೀ ಮೋಹಿನಿ' ಮುಕ್ತಾಯವಾಗಲಿದೆ. ಹೆಚ್ಚು ಟಿಆರ್ಪಿ ಇದ್ದ ಈ ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ಜನರ ಮನಸ್ಸು ಗೆದ್ದಿದ್ದಂತೂ ನಿಜ. ಮೂರು ವರ್ಷಗಳ ಕಾಲ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿದ್ದ 'ಯಾರೇ ನೀ ಮೋಹಿನಿ' ಧಾರಾವಾಹಿ ಇದೇ ಬುಧವಾರ ಅಂತ್ಯಗೊಳ್ಳಲಿದೆ.
ಈಗಾಗಲೇ ಧಾರಾವಾಹಿಯ ಕ್ಲೈಮ್ಯಾಕ್ಸ್ ಸಂಚಿಕೆಗಳು ಪ್ರಸಾರವಾಗುತ್ತಿದೆ. ಶ್ರುತಿ ನಾಯ್ಡು ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ' ಧಾರಾವಾಹಿ ತಮಿಳಿನ 'ಯಾರಡಿ ನೀ ಮೋಹಿನಿ' ರೀಮೇಕ್ ಆಗಿದ್ದು ವೀಕ್ಷಕರ ಮನ ಗೆಲ್ಲುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ. ಕಥಾನಾಯಕಿ ಬೆಳ್ಳಿಗೆ ನಾಯಕ ವಿಧುರ ಮುತ್ತು ಮಾವನನ್ನು ಮದುವೆಯಾಗುವ ಬಯಕೆ. ಮಾತ್ರವಲ್ಲ ಮುತ್ತುಮಾಮನ ಮೊದಲನೇ ಹೆಂಡತಿ ಚಿತ್ರ ಎಂದರೆ ಪ್ರಾಣ. ಮುತ್ತು ಮಾವನ ಒಳ್ಳೆಯದಕ್ಕಾಗಿ ಏನು ಬೇಕಾದರೂ ಮಾಡುವ ಬೆಳ್ಳಿಯನ್ನು ಮುತ್ತುವಿಗೆ ಮದುವೆ ಮಾಡಿಸಬೇಕೆಂದು ಚಿತ್ರ ಆತ್ಮ ಕೂಡಾ ಬಯಸುತ್ತದೆ. ಆದರೆ ಇವರ ಮದುವೆಗೆ ಸಾಕಷ್ಟು ಅಡೆತಡೆಗಳು ಉಂಟಾಗುತ್ತವೆ.
ಎಲ್ಲಾ ಅಡೆತಡೆಗಳನ್ನು ದಾಟಿ ಮುತ್ತು ಹಾಗೂ ಬೆಳ್ಳಿ ಮದುವೆಯಾದರೂ ಅವರ ಜೀವನ ಸುಖಕರವಾಗಿ ಸಾಗುವುದಿಲ್ಲ. ಮಲತಾಯಿಯ ಕುತಂತ್ರ, ವಿಲನ್ ಮಾಯಾಳಿಂದಾಗಿ ಮುತ್ತು ಹಾಗೂ ಬೆಳ್ಳಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ..? ಮುತ್ತು ಮೊದಲ ಪತ್ನಿ ಚಿತ್ರ ಆತ್ಮ ಹೇಗೆ ಈ ಜೋಡಿಯನ್ನು ಕಾಪಾಡುತ್ತದೆ ಎಂಬುದೇ ಈ ಧಾರಾವಾಹಿಯ ಕಥಾಹಂದರವಾಗಿತ್ತು. ನಾಯಕ ಮುತ್ತು ಮಾವನಾಗಿ ಸೂರಜ್ ಹೊಳಲು, ನಾಯಕಿ ಬೆಳ್ಳಿಯಾಗಿ ಸುಷ್ಮಾಶೇಖರ್, ಖಳನಾಯಕಿ ಮಾಯಾ ಆಗಿ ಐಶ್ವರ್ಯಾ ಬಸ್ಪುರೆ ,ಮುತ್ತುವಿನ ಮೊದಲ ಹೆಂಡತಿ ಚಿತ್ರಾ ಆಗಿಭಾರತಿ ಹೆಗ್ಡೆ ಹಾಗೂ ಮುತ್ತುವಿನ ಮಲತಾಯಿ ಆಗಿ ಅಂಬುಜ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.