ಫೇಮಸ್ ಗಾಯಕ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ಇಂದು 73ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹಾಡುಗಳ ಸಂಖ್ಯೆ ಅಪಾರ. ಹಾಗೇ ಅವರು ಗಳಿಸಿರುವ ಅಭಿಮಾನಿಗಳ ಸಂಖ್ಯೆಯೂ ಸಹ ಲೆಕ್ಕವಿಲ್ಲದಷ್ಟು. ಇದುವರೆಗೆ 16 ಭಾಷೆಗಳಲ್ಲಿ 40000 ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ ಗಿನ್ನಿಸ್ ದಾಖಲೆ ಸಹ ಬರೆದವರು.
ಆರಂಭದಲ್ಲಿ ಸಂಗೀತ ನಿರ್ದೇಶಕ ಎಂ.ರಂಗರಾವ್ ಅವರ ಸಹಾಯದಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಿದ ಎಸ್.ಪಿ.ಬಿ, ಕನ್ನಡ ಹಾಡುಗಳಷ್ಟೆ ಕನ್ನಡ ನಾಡನ್ನು ಸಹ ಪ್ರೀತಿಸಿದವರು. ನನ್ನ ಮುಂದಿನ ಜನ್ಮ ಏನಿದ್ದರೂ ಕನ್ನಡ ನಾಡಿನಲ್ಲೇ ಎನ್ನುವಷ್ಟರ ಮಟ್ಟಿಗೆ ಅವರು ಪ್ರೀತಿ ತೋರುತ್ತ ಬಂದಿದ್ದಾರೆ ಈ ಶ್ರೀಪತಿ ಪಂಡಿತಾರದ್ಯುಲ ಬಾಲಸುಬ್ರಮಣ್ಯ.
1967ರಲ್ಲಿ ‘ನಕ್ಕರೆ ಅದೇ ಸ್ವರ್ಗ’ ಚಿತ್ರದಿಂದ ಕನ್ನಡ ಚಲನಚಿತ್ರದ ಸಂಗೀತ ಕ್ಷೇತ್ರದಲ್ಲಿ ಪಯಣ ಪ್ರಾರಂಭಿಸಿದ ಎಸ್.ಪಿ.ಬಿ, 52 ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಹಾಡುತ್ತಲೇ ಬರುತ್ತಿದ್ದಾರೆ. ಗಾಯನದ ಜತೆಗೆ ನಟನೆ, ಸಂಗೀತ ನಿರ್ದೇಶನ ಸಹ ಮಾಡಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಹಲವಾರು ಶಿಷ್ಯಂದಿರನ್ನು ಹುಟ್ಟು ಹಾಕಿದವರು.
ಇವರು ನಟಿಸಿದ್ದ ಒಂದು ಸಿನಿಮಾಗೆ ಡಾ. ರಾಜಕುಮಾರ್ ಒಂದು ಹಾಡು ಹೇಳಿದ್ದಾರೆ. ಸಂಗೀತ ಕಲಿತವನಲ್ಲ ಎಂದು ಹೇಳುತ್ತಲೇ ಎಸ್ಪಿಬಿ ಅವರು ‘ಶಂಕರಾಭರಣ’ ಸಿನಿಮಾಗೆ ಹಾಡಿದ್ದು ಯಾರು ತಾನೇ ಮರೆಯಲಿಕ್ಕೆ ಸಾಧ್ಯ. ನಾನು ಘಂಟಸಾಲ ಅವರ ಶಿಷ್ಯ ಎನ್ನುವ ಎಸ್ಪಿಬಿ, ಮಹಮ್ಮದ್ ರಫಿ ಹಾಗೂ ದಕ್ಷಿಣ ಭಾರತದ ಎಸ್.ಜಾನಕಿ ಅವರನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.