ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಈ ಧಾರಾವಾಹಿ ಯಾವಾಗ ಮುಗಿಯುವುದೋ ಎಂದು ಕಾಯುತ್ತಿದ್ದರೆ ಮತ್ತೆ ಕೆಲವರು ಧಾರಾವಾಹಿ ಇನ್ನೂ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಆದರೆ ಸಾಕಷ್ಟು ಜನ ಮಾತ್ರ ಇನ್ನೂ ಈ ಧಾರಾವಾಹಿ ನೋಡುವುದನ್ನು ಮಾತ್ರ ನಿಲ್ಲಿಸಿಲ್ಲ. ಈ ಧಾರಾವಾಹಿ ಟಿಆರ್ಪಿ ಕೂಡಾ ಸ್ವಲ್ಪವೂ ಕಡಿಮೆ ಆಗಿಲ್ಲ. ಧಾರಾವಾಹಿ ಕಳೆದ ಕೆಲವು ದಿನಗಳಿಂದ ಟ್ವಿಸ್ಟ್ ಪಡೆದುಕೊಂಡಿದ್ದು ಇನ್ನೇನು ಸೀರಿಯಲ್ ಮುಗಿಯಬಹುದು ಅಂತ ಕೆಲವರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ಧಾರಾವಾಹಿ ಅಭಿಮಾನಿಗಳು ಮಾತ್ರ 6 ವರ್ಷಗಳಿಂದ ನಮ್ಮನ್ನು ರಂಜಿಸಿರುವ ಧಾರಾವಾಹಿ ಇನ್ನು ಮುಗಿಯುತ್ತದೆ ಎಂದು ಬೇಸರದಲ್ಲಿದ್ದರು.
ಆದರೆ ಅಗ್ನಿಸಾಕ್ಷಿ ಧಾರಾವಾಹಿ ಈಗಲೇ ಮುಗಿಯುದಿಲ್ಲವಂತೆ. ಅಸಲಿ ಕಥೆ ಶುರುವಾಗುವುದೇ ಇನ್ನು ಮುಂದೆ ಅಂತೆ. ಹೀಗೆಂದು ಹೇಳಿದವರು ಸ್ವತ: ಸನ್ನಿಧಿ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ. ಗಿರ್ಗಿಟ್ಲೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಷ್ಟು ದಿನ ಚಂದ್ರಿಕಾ ಆಡಿದ್ದೇ ಆಟ. ಚಂದ್ರಿಕಾ ಹಾಗೂ ಕೌಶಿಕ್ ಮುಖವಾಡ ಕಳಚಿಬಿದ್ದಿದೆ. ಇನ್ನುಮುಂದೆ ಸನ್ನಿಧಿ ದರ್ಬಾರ್ ಆರಂಭವಾಗಲಿದೆ ಎಂದು ವೈಷ್ಣವಿ ಮುನ್ಸೂಚನೆ ಕೊಟ್ಟಿದ್ದಾರೆ. ಹಾಗೇ ಜನರು ಇನ್ನೂ ನಮ್ಮನ್ನು ಹರಸುತ್ತಾರೆ ಎಂಬ ಭರವಸೆಯನ್ನೂ ವೈಷ್ಣವಿ ವ್ಯಕ್ತಪಡಿಸಿದ್ದಾರೆ.