ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ಆಗಿ ಅಭಿನಯಿಸಿದ್ದ ಐಶ್ವರ್ಯ ಪಿಸ್ಸೆ, ಈಗ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗಿನ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಐಶ್ವರ್ಯ ಅಭಿನಯಿಸುತ್ತಿದ್ದಾರೆ.
ಧಾರಾವಾಹಿ ಹೊರತುಪಡಿಸಿ ಐಶ್ವರ್ಯ ಪಿಸ್ಸೆ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ತೆಲುಗು ಬಿಗ್ ಬಾಸ್ಗೆ ಐಶ್ವರ್ಯ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತೆಲುಗಿನಲ್ಲಿ ಬಿಗ್ ಬಾಸ್ ಶೋಗೆ ಚಾಲನೆ ಸಿಕ್ಕಿದೆ. ಈಗಾಗಲೇ ಪ್ರೋಮೋ ಶೂಟಿಂಗ್ ನಡೆದಿದೆ. ನಾಗಾರ್ಜುನ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ನಲ್ಲಿ ಐಶ್ವರ್ಯ ಪಿಸ್ಸೆ ಭಾಗವಹಿಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಐಶ್ವರ್ಯ, ಇದೆಲ್ಲಾ ಸುಳ್ಳು ಸುದ್ದಿ ಎನ್ನುತ್ತಿದ್ದಾರೆ.
ಐಶ್ವರ್ಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಕ್ರಿಯೇಟ್ ಆಗಿದ್ದು ಈ ಪೇಜ್ ಮೂಲಕ ಐಶ್ವರ್ಯ ಬಿಗ್ ಬಾಸ್ ಹೋಗಲಿದ್ದಾರೆ ಎನ್ನಲಾಗಿತ್ತು. ಇದು ಅರಿವಾಗುತ್ತಿದ್ದಂತೆ ಐಶ್ವರ್ಯ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಇದು ನಕಲಿ ಖಾತೆ, ಇದರಿಂದ ನಿಮಗೆ ಯಾವುದೇ ಸಂದೇಶ ಬಂದಲ್ಲಿ ಇಗ್ನೋರ್ ಮಾಡಿ ಎಂದು ಹೇಳಿದ್ದಾರೆ. ಐಶ್ವರ್ಯ ಇತ್ತೀಚೆಗೆ ಪತಿ ಹರಿ ವಿನಯ್ ಜೊತೆ 'ಇಸ್ಮಾರ್ಟ್ ಶಂಕರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.