'ಬಿಗ್ ಬಾಸ್ ಸೀಸನ್ 8' ರಲ್ಲಿ ದಿವ್ಯಾ ಸುರೇಶ್ ಮನೆಯ ಎರಡನೇ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಗಿ ಆಯ್ಕೆಯಾದ ದಿನದಿಂದ ದಿವ್ಯಾ ಸುರೇಶ್ಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಟಾಸ್ಕ್ಗಳಿಗೆ ಸದಸ್ಯರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು.
ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯವ ನಾನಾ ನೀನಾ ಟಾಸ್ಕ್ಗಾಗಿ ಅಂಕ ಪಡೆಯಲು ವಿಭಿನ್ನವಾದ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್ಗಳಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಅದು ಉಳಿದ 7 ಮಂದಿ ಈ ಟಾಸ್ಕ್ನಲ್ಲಿ ಭಾಗಿಯಾಗುವಂತಿಲ್ಲ. ಒಂದು ಟಾಸ್ಕ್ನಲ್ಲಿ ಇಬ್ಬರು, ಮತ್ತೊಂದು ಟಾಸ್ಕ್ನಲ್ಲಿ ಐವರು ಹೀಗೆ ಆಟ ಆಡುವವರ ಸಂಖ್ಯೆಯನ್ನು ಬಿಗ್ ಬಾಸ್ ನಿರ್ಧರಿಸಿದ್ದಾರೆ. ಆದರೆ, ಯಾರು ಆಡಬೇಕು ಎಂಬುದು ಮನೆಯ ಕ್ಯಾಪ್ಟನ್ ಹಾಗೂ ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿದೆ.
ಜೋಳದ ಕಣಜ ಟಾಸ್ಕ್ನಲ್ಲಿ ಕೇವಲ ಇಬ್ಬರು ಮಾತ್ರ ಆಡಬೇಕು. ಅದಕ್ಕೆ ಮನೆಯಲ್ಲಿ ಶಮಂತ್, ಚಕ್ರವರ್ತಿ, ಶುಭಾ ಪೂಂಜಾ, ವೈಷ್ಣವಿ ಹಾಗೂ ದಿವ್ಯಾ ಉರುಡುಗ ತಾವಾಗಿಯೇ ಈ ಟಾಸ್ಕ್ನಿಂದ ಹಿಂದೆ ಸರಿದರು. ಪ್ರಶಾಂತ್ ಸಂಬರಗಿ, ಮಂಜು ಹಾಗೂ ಅರವಿಂದ್ ತಾವು ಆಡಬೇಕೆಂದು ಪಟ್ಟು ಹಿಡಿದಿದ್ದರು. ಕೊನೆಗೆ ಕ್ಯಾಪ್ಟನ್ ಸ್ಪರ್ಧಿಗಳಿಗೆ ಆಡಲು ಸಿಕ್ಕಿರುವ ಅವಕಾಶಗಳ ಆಧಾರದ ಮೇಲೆ ಮಂಜು ಹಾಗೂ ಅರವಿಂದ್ ಈ ಟಾಸ್ಕ್ನಲ್ಲಿ ಆಡಲು ದಿವ್ಯಾ ಸುರೇಶ್ ಆಯ್ಕೆ ಮಾಡಿದರು.
ಇದಕ್ಕೆ ಪ್ರಶಾಂತ್ ಆಕ್ರೋಶ ವ್ಯಕ್ತಪಡಿಸಿ ಇದು ಸರಿಯಲ್ಲ, ಮಂಜು ವಿಷಯದಲ್ಲಿ ದಿವ್ಯಾ ಸುರೇಶ್ ಕೊಂಚ ಸಾಫ್ಟ್ ಆಗಿ ಆಲೋಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ದಿವ್ಯಾ ಯಾವುದೇ ಸಾಫ್ಟ್ ಇಲ್ಲ. ಆಟ ಅಷ್ಟೇ ಎಂದರು.
ಕಾಲಾಯಾ ತಸ್ಮೈ ನಮಃ ಆಟದಲ್ಲಿ ಕಾಲಿಗೆ ಹಗ್ಗ ಕಟ್ಟಿಕೊಂಡು ಬ್ರೆಡ್ ತಿನ್ನಬೇಕಿತ್ತು. ಇದರಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದ ವೈಷ್ಣವಿ, ಚಂದ್ರಚೂಡ್, ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾಗೆ ಅವಕಾಶ ನೀಡಲಾಯಿತು.
ನಾನಾ ನೀನಾ ಸವಾಲಿಗೆ ಇಂದು ನಿರ್ಣಾಯಕ ದಿನ. ವಾರ ಪೂರ್ತಿ ನಡೆದ ಟಾಸ್ಕ್ಗಳಲ್ಲಿ ಅತಿ ಕಡಿಮೆ ಅಂಕಗಳನ್ನು ಪಡೆದವರು ನೇರವಾಗಿ ನಾಮಿನೇಟ್ ಆಗಲಿದ್ದಾರೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಕ್ಯಾಪ್ಟನ್ ಆಗಲು ಕೊನೆಯ ಅವಕಾಶ ಈ ವಾರ ಸಿಗಲಿದೆ.