ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿಗೆ ಮುದ್ದಾದ ಚೆಲುವೆಯ ಆಗಮನವಾಗಿದೆ. ಇತ್ತೀಚೆಗಷ್ಟೇ ಧಾರಾವಾಹಿಯ ಕಥೆಗೆ ಹೊಸ ಟ್ವಿಸ್ಟ್ ಬಂದಿದೆ. ಮನಸ್ವಿನಿ ಆಗಿ ಪ್ರೇಮಲೋಕದ ಮೂಲಕ ಕಿರುತೆರೆಗೆ ಪರಿಚಿತಳಾದ ಈ ಸುಂದರಿ ಹೆಸರು ದರ್ಶಿನಿ ಆಲಿಯಾಸ್ ಪ್ರಿಯದರ್ಶಿನಿ ಗೌಡ.
ಉದಯ ಟಿವಿಯಲ್ಲಿ ನಿರೂಪಣೆ ಮಾಡುವ ಮೂಲಕ ಕರಿಯರ್ ಆರಂಭಿಸಿದ ಈಕೆ, ನಂತರ ಧಾರಾವಾಹಿಯಲ್ಲಿ ಕೂಡಾ ನಟಿಸುವ ಅವಕಾಶ ಪಡೆದರು. ದರ್ಶಿನಿಗೆ ಇಂಜಿನಿಯರಿಂಗ್ ಮಾಡಬೇಕು ಎಂಬ ಆಸೆ ಇತ್ತು. ಸಿಇಟಿ ಬರೆಯದ ಕಾರಣ ಇಂಜಿನಿಯರಿಂಗ್ ಮಿಸ್ ಮಾಡಿಕೊಂಡರು. ಆದರೇನಂತೆ ಎಂದು ತಾಂತ್ರಿಕ ಶಿಕ್ಷಣ ಪಡೆಯುವ ನಿರ್ಧಾರ ಮಾಡಿ ಹಾಸನದ ಡಿಪ್ಲೊಮಾ ಕಾಲೇಜಿಗೆ ಸೇರಿದರು. ಡಿಪ್ಲೊಮಾ ಮೊದಲ ವರ್ಷದಲ್ಲಿ ಒಳ್ಳೆಯ ಅಂಕ ತೆಗೆದಿದ್ದ ದರ್ಶಿನಿ ಎರಡನೇ ವರ್ಷ ಕೂಡಾ ಅಷ್ಟೇ ಒಳ್ಳೆ ಮಾರ್ಕ್ಸ್ ಪಡೆದು ಪಾಸ್ ಆದರು.ಅಷ್ಟರಲ್ಲಿ ಬೇರೊಂದು ಅವಕಾಶ ಅವರನ್ನು ಹುಡುಕಿ ಬಂತು. ಬಯಸದೇ ಬಂದ ಅವಕಾಶವನ್ನು ಅಸ್ತು ಎಂದು ಒಪ್ಪಿದ್ದೇ ಅವರಿಂದು ಮನಸ್ವಿನಿ ಆಗಿ ಬದಲಾಗಲು ಕಾರಣವಾಯ್ತು.
ಸ್ಥಳೀಯ ವಾಹಿನಿಯಲ್ಲಿ ಆ್ಯಂಕರ್ ಆಗುವ ಅವಕಾಶ ದೊರೆತ ನಂತರ ಓದಿಗೆ ಗುಡ್ ಬೈ ಹೇಳಿ ನಿರೂಪಣೆ ಆರಂಭಿಸಿದರು. 'ಪ್ರೇಮಲೋಕ'ದ ಮನಸ್ವಿನಿ ಆಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ದರ್ಶಿನಿ ಈಗಾಗಲೇ ಸಿನಿಮಾ ಒಂದರಲ್ಲಿ ನಟಿಸಿದ್ದು ಅದು ಬಿಡುಗಡೆಯಾಗಬೇಕಿದೆ. ಕನ್ನಡದ ಜೊತೆಗೆ ತಮಿಳು ಸಿನಿಮಾವೊಂದರಲ್ಲಿ ಕೂಡಾ ಇವರು ನಟಿಸಿದ್ದಾರೆ. ನಟನೆ ಬಗ್ಗೆ ತಿಳಿಯದ ದರ್ಶಿನಿಗೆ ಪ್ರೇಮಲೋಕ ತಂಡದಿಂದ ಆಫರ್ ಬಂದಾಗ ಸ್ವಲ್ಪ ಭಯವಾಗಿದ್ದು ನಿಜ. ಆದರೆ ಧಾರಾವಾಹಿ ತಂಡ ಪ್ರೋತ್ಸಾಹ ನೀಡಿದ ಕಾರಣ ಧೈರ್ಯವಾಗಿ ಕ್ಯಾಮರಾ ಎದುರಿಸಿದರು. ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತದ್ದು ನನ್ನ ಭಾಗ್ಯ ಎಂದು ಹೇಳುವ ದರ್ಶಿನಿ, ನಟಿಯಾಗಲು ಮನೆಯವರ ಸಂಪೂರ್ಣ ಬೆಂಬಲವಿದೆ. ಆ್ಯಕ್ಟಿಂಗ್ ಮಾಡಲು ಅವಕಾಶ ದೊರೆತಾಗ ದರ್ಶಿನಿ ಅವರೇ ಹಿಂಜರಿದಿದ್ದರು. ಆದರೆ ಬಂದ ಅವಕಾಶ ಬಿಡಬೇಡ ಎಂದು ಆಕೆಯ ತಂದೆ ಹೇಳಿದ ಕಾರಣ ಬಣ್ಣದ ಲೋಕಕ್ಕೆ ಕಾಲಿಟ್ಟರು.