ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ನಾಯಕ ಹರ್ಷನ ಅಮ್ಮ ರತ್ನಮಾಲಾ ಅಲಿಯಾಸ್ ಅಮ್ಮಮ್ಮ ಆಗಿ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿರುವ ಚಿತ್ಕಲಾ ಬಿರಾದಾರ್ ಪೋಷಕ ಪಾತ್ರಗಳ ಮೂಲಕವೇ ಬಣ್ಣದ ಲೋಕದಲ್ಲಿ ಮನೆ ಮಾತಾಗಿದ್ದಾರೆ.
ಹೌದು, ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ಚಿತ್ಕಲಾ ಬಿರಾದಾರ್, ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಕೂಡಾ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ಒಂದಷ್ಟು ಸಮಯಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿರುವ ಚಿತ್ಕಲಾ ಆಕಸ್ಮಾತ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಮುಂದೆ ಉಪನ್ಯಾಸಕಿ ವೃತ್ತಿಗೆ ಬಾಯ್ ಹೇಳಿದ ಚಿತ್ಕಲಾ ಪೂರ್ಣ ಪ್ರಮಾಣದ ನಟಿಯಾಗಿ ಕಮಾಲ್ ಮಾಡುತ್ತಿದ್ದಾರೆ.
ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕವಾಗಿ ಸಕ್ರಿಯರಾಗಿದ್ದ ಚಿತ್ಕಲಾ ನಟನಾ ಕ್ಷೇತ್ರಕ್ಕೆ ಬರಲು ಆಪ್ತರ ಒತ್ತಾಯವೇ ಮೂಲ ಕಾರಣ. ಬಂದೇ ಬರುತಾವ ಕಾಲದ ನಂತರ ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ನೂರೆಂಟು ಸುಳ್ಳು, ಬಾ ನನ್ನ ಸಂಗೀತ, ಮಾನಸ ಸರೋವರ ಸೇರಿದಂತೆ ಮೂವತ್ತೈದು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅಗ್ನಿಸಾಕ್ಷಿಯಲ್ಲಿ ನಾಯಕಿಯ ಅಮ್ಮನಾಗಿ ವೀಕ್ಷಕರ ಮನ ಸೆಳೆದ ಚಿತ್ಕಲಾ ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಅಯ್ಯಂಗಾರ್ ಪುಷ್ಪವಲ್ಲಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡರು. ಇದೀಗ ರತ್ನಮಾಲಾ ಆಗಿ ಬ್ಯುಸಿಯಾಗಿರುವ ಚಿತ್ರಾ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟನಾ ಛಾಪು ಪಸರಿಸಿದ್ದಾರೆ.
ಮದುವೆ ಮನೆ ಚಿತ್ರದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಚಿತ್ಕಲಾ ಬಿರಾದಾರ್ ಮುಂದೆ ಫ್ಯಾಂಟಮ್, ತ್ರಿಬ್ಬಲ್ ರೈಡಿಂಗ್ , ಯುವರತ್ನ, ಕಾಲಚಕ್ರ, ನಿನ್ನ ಸನಿಹಕೆ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.