ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕ ಶಿವ ಆಗಿ ನಟಿಸುತ್ತಿರುವ ಚೇತನ್ ಚಂದ್ರ ಮುದ್ದಿನ ರಾಜಕುಮಾರಿಯ ನಾಮಕರಣ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ತಾವು ಪ್ರೀತಿಸಿದ ಹುಡುಗಿ ರಚನಾ ಜೊತೆ 2017 ರಲ್ಲಿ ಚೇತನ್ ಸಪ್ತಪದಿ ತುಳಿದಿದ್ದರು.
ಕಳೆದ ವರ್ಷ ಆಗಸ್ಟ್ನಲ್ಲಿ ಚೇತನ್, ರಚನಾ ಜೋಡಿಗೆ ಮುದ್ದಾದ ಹೆಣ್ಣುಮಗು ಜನಿಸಿತ್ತು. ಚೇತನ್ ತಮ್ಮ ಮಗಳಿಗೆ 'ಸ್ಮಯ' ಎಂದು ಹೆಸರಿಟ್ಟಿದ್ದಾರೆ. ಶಿವಮೊಗ್ಗದ ಸಾಗರದಲ್ಲಿ ಈ ನಾಮಕರಣ ಕಾರ್ಯಕ್ರಮ ಜರುಗಿದೆ. ಐದು ತಿಂಗಳ ಸ್ಮಯ ಮುದ್ದು ಗೊಂಬೆಯಂತೆ ಕಂಗೊಳಿಸುತ್ತಿದ್ದು ಎಲ್ಲರ ಗಮನ ಸೆಳೆದಿದ್ದಳು. ಪುತ್ರಿ ನಾಮಕರಣದ ಫೋಟೋಗಳನ್ನು ಚೇತನ್ ಚಂದ್ರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದು ಶುಭಾಶಯ, ಕಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಚೇತನ್ 'ಸತ್ಯಂ ಶಿವಂ ಸುಂದರಂ' ಧಾರಾವಾಹಿ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾನು ನನ್ನ ಕನಸು' ಧಾರಾವಾಹಿಯ ಕಾರ್ತಿಕ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಗೆ ಬರುವ ಮುನ್ನ ಚೇತನ್ ಚಂದ್ರ ಸಿನಿಮಾಗಳಲ್ಲಿ ನಟಿಸಿದ್ದರು. ಮೊದಲ ಬಾರಿ 'ಪಿಯುಸಿ' ಸಿನಿಮಾದಲ್ಲಿ ಅವರು ನಾಯಕನಾಗಿ ಬಣ್ಣ ಹಚ್ಚಿದ್ದರು. ನಂತರ 'ಪ್ರೇಮಿಸಂ', 'ರಾಜಧಾನಿ', 'ಕುಂಭ ರಾಶಿ', 'ಪ್ಲಸ್', 'ಜಾತ್ರೆ' ಸಿನಿಮಾಗಳಲ್ಲಿ ಚೇತನ್ ಅಭಿನಯಿಸಿದ್ದಾರೆ.