ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸುತ್ತಿರುವ 'ಬ್ರಹ್ಮಗಂಟು' ಧಾರಾವಾಹಿ ಯಶಸ್ವಿ 900 ಸಂಚಿಕೆಗಳನ್ನು ಪೂರೈಸಿ 1000 ಎಪಿಸೋಡ್ನತ್ತ ದಾಪುಗಾಲಿಡುತ್ತಿದೆ. ವಿಭಿನ್ನ ಕಥಾ ಹಂದರವುಳ್ಳ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಗೀತಾ ಮತ್ತು ಲಕ್ಕಿಯೇ ಕೇಂದ್ರಬಿಂದು.
ಲಕ್ಕಿಗೆ ಇಷ್ಟವಿಲ್ಲದಿದ್ದರೂ ಹೇಗೋ ಅವನ ಮದುವೆ ಗುಂಡಮ್ಮ ಅಲಿಯಾಸ್ ಗೀತಾ ಜೊತೆ ಆಗಿಹೋಗುತ್ತದೆ. ಪತ್ನಿ ದಪ್ಪಗಿದ್ದಾಳೆ ಎಂದು ತಾತ್ಸಾರ ಮಾಡುತ್ತಿದ್ದ ಲಕ್ಕಿ ನಂತರ ಆಕೆಯನ್ನು ಪ್ರೀತಿಸಲು ಆರಂಭಿಸುತ್ತಾನೆ. ತಾನೊಬ್ಬ ಒಳ್ಳೆ ಕಬಡ್ಡಿ ಆಟಗಾರನಾಗಬೇಂಬ ಪತಿ ಕನಸಿಗೆ ಗೀತಾ ಬೆನ್ನುಲುಬಾಗಿ ನಿಲ್ಲುತ್ತಾಳೆ. ಲಕ್ಕಿ ತಾನು ಅಂದುಕೊಂಡಂತೆ ಆಟದಲ್ಲಿ ಸಾಧಿಸುತ್ತಾನಾ...?ಅವನ ಸಾಧನೆಯಲ್ಲಿ ಅಡ್ಡಿಯಾಗುವ ಸಮಸ್ಯೆಗಳೇನು...? ಯಾರು ಲಕ್ಕಿ ಹಾಗೂ ಗೀತಾಗೆ ಕಷ್ಟ ಕೊಡುತ್ತಾರೆ..? ಇದೆಲ್ಲಾ ತೊಂದರೆಗಳಿಂದ ಲಕ್ಕಿ ಹೇಗೆ ಹೊರಬರುತ್ತಾನೆ...? ಎಂಬುದೇ ಧಾರಾವಾಹಿಯ ಕಥೆ.
ಈ ಧಾರಾವಾಹಿಯಲ್ಲಿ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯ ಮಹತ್ವವನ್ನು ಸಾರಲಾಗಿದೆ. ನಾಯಕನಾಗಿ ಭರತ್ ಬೋಪಣ್ಣ ಹಾಗೂ ನಾಯಕಿಯಾಗಿ ಗೀತಾಭಾರತಿ ಭಟ್ ಅಭಿನಯಿಸಿದ್ದಾರೆ. ಉಳಿದಂತೆ ನಾಗಾಭರಣ, ಗಾಯತ್ರಿ ಪ್ರಭಾಕರ್, ಯುಕ್ತಿ ನಾಯ್ಡು, ಸ್ವಾತಿ, ಹರ್ಷ, ಶೋಭಿತಾ ಶಿವಣ್ಣ ಮುಂತಾದವರು 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿದ್ದಾರೆ.