ಬಿಗ್ ಬಾಸ್ ಕನ್ನಡ ಸೀಸನ್ 8 ರ ಏಳನೇ ವಾರದ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಹೋಗುವವರು ಯಾರು ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕಳೆದ ವಾರ ಅದೃಷ್ಟದ ಬಲದಿಂದ ಎಲಿಮಿನೇಷನ್ನಿಂದ ತಪ್ಪಿಸಿಕೊಂಡ ಶಮಂತ್ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ. ಉಳಿದಂತೆ ಮಂಜು ಪಾವಗಡ, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ರಾಜೀವ್, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್ ಅವರ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.
ಶಮಂತ್ ಕಳೆದ ವಾರವೇ ಎಲಿಮಿನೇಟ್ ಆಗುವುದರಲ್ಲಿದ್ದರು. ಆದರೆ, ವೈಜಯಂತಿ ಅಡಿಗ ಮನೆಯಿಂದ ಹೊರ ಹೋದ ಕಾರಣ ಶಮಂತ್ ಬಚಾವ್ ಆಗಿದ್ದರು. ಹೀಗಾಗಿ ಈ ವಾರ ಶಮಂತ್ ಮನೆಯಿಂದ ಹೊರ ಹೋದರೂ ಅಚ್ಚರಿ ಇಲ್ಲ.ಇತ್ತ ವಿಶ್ವನಾಥ್ ಕೂಡ ಮನೆಯಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. ಕಳೆದ ಎರಡು ವಾರ ವಿಶ್ವನಾಥ್ ಅಷ್ಟೊಂದು ಸಕ್ರೀಯರಾಗಿ ಕಾಣಿಸುತ್ತಿರಲಿಲ್ಲ. ಇದೇ ಕಾರಣದಿಂದ ವಿಶ್ವನಾಥ್ ಬಿಗ್ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆಗಳನ್ನು ಸಹ ತಳ್ಳಿ ಹಾಕುವಂತಿಲ್ಲ.
ಈ ವಾರ ಹಾಫ್ ಜರ್ನಿ ಮುಗಿಸಿ ಶಮಂತ್ ಇಲ್ಲವೇ ವಿಶ್ವನಾಥ್ ಮನೆಯಿಂದ ಹೊರ ಹೋಗಬಹುದು ಎನ್ನಲಾಗುತ್ತಿದೆ. ಅಂತಿಮವಾಗಿ ಕಡಿಮೆ ವೋಟ್ ಪಡೆದವರನ್ನು ಈ ವಾರ ಎಲಿಮಿನೇಟ್ ಮಾಡಲಾಗುವುದು.
ಇಮ್ಯುನಿಟಿ ಪಡೆದ ರಾಜೀವ್:
ಬಿಗ್ಬಾಸ್ ಮನೆಯಲ್ಲಿ ರಾಜೀವ್ ಗೋಲ್ಡನ್ ಪಾಸ್ ಪಡೆದುಕೊಂಡು ಇಡೀ ಸೀಸನ್ನ ಇಮ್ಯುನಿಟಿ ಪಡೆದುಕೊಂಡಿದ್ದಾರೆ. ನಿನ್ನೆ ಶನಿವಾರ ಮನೆಯ ಎಲ್ಲಾ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ಪ್ರತಿಯೊಬ್ಬರು ಇನ್ನೋರ್ವ ಸ್ಪರ್ಧಿಯ ಲಗೇಜ್ ಎತ್ತಿಕೊಂಡು ಬಸ್ ಹತ್ತಬೇಕಾಗಿತ್ತು. ಕೊನೆಯಲ್ಲಿ ಉಳಿದುಕೊಂಡವರ ಕೈಯಲ್ಲಿರುವ ಬ್ಯಾಗ್ ಮೇಲಿನ ಚಿತ್ರದಲ್ಲಿರುವ ಸ್ಪರ್ಧಿ ಆಟದಿಂದ ಔಟ್ ಆಗುತ್ತಿದ್ದರು. ಅದರಂತೆ ಕೊನೆಯವರೆಗೂ ಆಟದಲ್ಲಿ ರಾಜೀವ್ ಉಳಿದುಕೊಂಡು ಗೋಲ್ಡನ್ ಪಾಸ್ ಗೆದ್ದುಕೊಂಡರು.
ನಟ ಸುದೀಪ್ ಅನಾರೋಗ್ಯ ಕಾರಣ "ವಾರದ ಕತೆ ಕಿಚ್ಚನ ಜೊತೆ" ನಡೆಯದೆ ಎಪಿಸೋಡ್ ಮುಗಿದಿದೆ. ಇಂದು ಕೂಡ ಸುದೀಪ್ ನಿರೂಪಣೆ ಮಾಡುವುದಿಲ್ಲ. ಆದರೆ ಎಲಿಮಿನೇಷನ್ ಮಾತ್ರ ನಡೆಯಲಿದೆ.