ಬಿಗ್ ಬಾಸ್ ಮನೆಯಲ್ಲಿ ಇಡೀ ದಿನ ನಿರ್ಮಲಾ ಅವರ ಬಗ್ಗೆಯೇ ಚರ್ಚೆ ನಡೆಯಿತು. ಹಿಂದಿನ ದಿನ ರಾತ್ರಿ ನಿರ್ಮಲಾ ಅವರ ವರ್ತನೆ ಎಲ್ಲರನ್ನೂ ಆಶ್ಚರ್ಯ ಹಾಗೂ ಆತಂಕಕ್ಕೀಡು ಮಾಡಿತ್ತು.

ದಿನವಿಡೀ ತುಂಬಾ ಸಿಂಪಲ್ ಆಗಿ ಬಟ್ಟೆ ಧರಿಸಿದ್ದ ನಿರ್ಮಲಾ ಚೆನ್ನಪ್ಪ ಅವರು ಮಧ್ಯರಾತ್ರಿ ಆಗುತ್ತಿದ್ದಂತೆಯೇ ಸೀರೆ ಧರಿಸಿದ್ದಾರೆ. ಅಷ್ಟೇ ಅಲ್ಲ, ಮೇಕಪ್ ಮಾಡಿಕೊಂಡು ಕನ್ನಡಿ ಮುಂದೆ ನಿಂತಿದ್ದಾರೆ. ಅದೂ ಸಾಲದೆಂಬಂತೆ ಮೂಲೆಯಲ್ಲಿ ಕುಳಿತು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಮುಂದೇನಾಗುತ್ತೋ ಅಂತ ಭಯದ ವಾತಾವರಣ ನಿರ್ಮಾಣವಾಗಿತ್ತು.
ನನಗೆ ತುಂಬ ಟೆನ್ಷನ್ ಆಗ್ತಾ ಇದೆ. ತಲೆ ಕೆಡ್ತಾ ಇದೆ. ಸಡನ್ ಆಗಿ ಅವರು ಸೀರೆ ಉಟ್ಟುಕೊಂಡಾಗ ನನಗೆ ಭಯ ಆಗಿಹೋಯ್ತು. ಮಲಗುವಾಗ ಡ್ರೆಸ್ ಚೇಂಜ್ ಮಾಡುತ್ತೇನೆ ಎಂದಿದ್ದರು. ಆದರೆ ಚೇಂಜ್ ಮಾಡದೇ ಹಾಗೆಯೇ ಮಲಗಿದ್ದಾರೆ. ಅದಕ್ಕೆ ನನಗೆ ತುಂಬ ಭಯ ಆಗ್ತಾ ಇದೆ. ಎಲ್ಲರೂ ಆತಂಕಪಟ್ಟುಕೊಂಡಿದ್ದಾರೆ. ನನಗೆ ಏನು ಮಾಡಬೇಕು ಎಂಬುದು ಗೊತ್ತಾಗದೇ ಟೆನ್ಷನ್ ಆಗುತ್ತಿದೆ' ಎಂದು ಬಿಗ್ ಬಾಸ್ ಬಳಿ ಶಮಂತ್ ಬ್ರೋ ಗೌಡ ಆತಂಕ ತೋಡಿಕೊಂಡಿದ್ದಾರೆ.

'ನನಗೆ ಸೀರೆಯೇ ಇಷ್ಟ. ಇದರಲ್ಲೇ ಇರುತ್ತೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ಮೂರು ದಿನದಿಂದ ಹೆಂಗೆಂಗೂ ಬಿದ್ದುಕೊಂಡಿದ್ದೆ' ಎಂದು ಶಮಂತ್ಗೆ ನಿರ್ಮಲಾ ಸಮಜಾಯಿಷಿ ನೀಡಿದ್ದಾರೆ. ಈ ಉತ್ತರದಿಂದ ಶಮಂತ್ ಸಮಾಧಾನ ಆದಂತೆ ಕಾಣುತ್ತಿಲ್ಲ.

'ದಿನದ 24 ಗಂಟೆ ಒಬ್ಬೊಬ್ಬರೆ ಮಾತನಾಡುತ್ತಾರೆ. ವೀಕ್ಷಕರ ಕಣ್ಣು ತನ್ನ ಕಡೆಗೆ ಬೀಳಲಿ ಎಂದು ರಾತ್ರಿ ಮೇಕಪ್ ಮಾಡಿಕೊಂಡು ಬಂದಿದ್ದಾರೆ' ಎಂದೆಲ್ಲ ಇತರೆ ಸ್ಪರ್ಧಿಗಳು ಗುಸುಗುಸು ಮಾತನಾಡಿಕೊಂಡಿದ್ದಾರೆ. ಮೂಲೆಯಲ್ಲಿ ಕುಳಿತುಕೊಂಡು, 'ಇಲ್ಲಿ ನಾನು ಯಾರನ್ನೂ ಗೆಲ್ಲಲು ಬಂದಿಲ್ಲ. ನನ್ನನ್ನು ನಾನು ಗೆಲ್ಲಲು ಬಂದಿದ್ದೇನೆ' ಎಂದು ನಿರ್ಮಲಾ ಒಬ್ಬರೇ ಮಾತನಾಡಿಕೊಂಡಿದ್ದಾರೆ.

ಇದಾದ ಬಳಿಕ ಬೆಳಗ್ಗೆ ಬಿಗ್ ಬಾಸ್, ಎಲ್ಲರಿಗೂ ನಿಮಗೆ ಇಷ್ಟ ಆದವರು, ಆಗದವರಿಗೆ ಸೂಕ್ತ ಕಾರಣ ನೀಡಿ ಬ್ಯಾಡ್ಜ್ ಹಾಕುವಂತೆ ಆದೇಶಿಸಿತ್ತು. ಅದರಂತೆ ನಿರ್ಮಲಾ ಅವರಿಗೆ ಅತಿ ಹೆಚ್ಚು ಡಿಸ್ ಲೈಕ್ ಗಳು ಬಂದವು. ಎಲ್ಲರೊಂದಿಗೂ ಬೆರೆಯುತ್ತಿಲ್ಲ, ನಿನ್ನೆ ವರ್ತನೆ ಸರಿ ಅನಿಸಲಿಲ್ಲ. ಇಲ್ಲಿಗೆ ಬಂದಿರುವುದು ಎಲ್ಲರೊಂದಿಗೆ ಬೆರೆತು ಮಾತನಾಡಿ ಸಮಾಧಾನ ಮಾಡಿಕೊಳ್ಳಬೇಕು ಎಂದೆಲ್ಲಾ ಅನಿಸಿಕೆ ಅಭಿಪ್ರಾಯಗಳನ್ನು ಮನೆಯ ಸದಸ್ಯರು ಹಂಚಿಕೊಂಡರು.

ನಂತರ, ಈ ವಾರದ ಅತ್ಯಂತ ಕಳಪೆ ಪ್ರದರ್ಶನ ನೀಡಿದ ವ್ಯಕ್ತಿ ಹಾಗೂ ಉತ್ತಮ ಪ್ರದರ್ಶನ ನೀಡಿದ ವ್ಯಕ್ತಿಯನ್ನು ಮನೆಯ ಸದಸ್ಯರು ಆರಿಸುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಅದರಂತೆ ಉತ್ತಮ ಪ್ರದರ್ಶನಕ್ಕೆ ಪ್ರಶಾಂತ್ ಸಂಬರಗಿ ಹಾಗೂ ಕಳಪೆ ಪ್ರದರ್ಶನಕ್ಕಾಗಿ ಧನುಶ್ರೀ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಧನುಶ್ರೀ ಅವರನ್ನು 'ಜೈಲಿಗೆ' ಕಳುಹಿಸಲಾಯಿತು.
ನಾಳೆ ಎಲಿಮಿನೇಷನ್ ರೌಂಡ್ ನಡೆಯಲಿದೆ. ಮನೆಯಿಂದ ಹೊರ ಹೋಗುವ ಸದಸ್ಯರು ಯಾರು? ಅಥವಾ ಎಲಿಮಿನೇಷನ್ ನಡೆಯಲಿದೆಯಾ? ಎಂಬುದು ಕಾದು ನೋಡಬೇಕಾಗಿದೆ.