ಬಿಗ್ ಬಾಸ್, ಅತಿ ಹೆಚ್ಚು ವೀಕ್ಷಕರನ್ನು ಪಡೆದ ಕಿರುತೆರೆಯ ಖ್ಯಾತ ರಿಯಾಲಿಟಿ ಕಾರ್ಯಕ್ರಮ. ಈ ಕೊರೊನಾ ಸಮಸ್ಯೆ ಇರದಿದ್ದರೆ ಇಷ್ಟೊತ್ತಿಗಾಗಲೇ ಈ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಚಿತ್ರರಂಗ, ಕಿರುತೆರೆ ಸೇರಿದಂತೆ ಜನರ ಜೀವನದ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಬಿಗ್ ಬಾಸ್ ಜೊತೆಗೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ತಂಡ ಮತ್ತೆ ಜನರ ಮುಂದೆ ಬರಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಈ ವರ್ಷದ ಅಂತ್ಯದಲ್ಲಿ ಬಿಗ್ ಬಾಸ್ ಸೀಸನ್ 8 ಆರಂಭವಾಗಲಿದೆಯಂತೆ. ಈ ಸೀಸನ್ ಕೂಡಾ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡಾ ನಡೆದಿದೆಯಂತೆ. ಸುದೀಪ್ ಕೂಡಾ ತಮ್ಮ ಬ್ಯುಸಿ ಕಾಲ್ಶೀಟ್ ನಡುವೆಯೂ ಬಿಗ್ ಬಾಸ್ ಜವಾಬ್ದಾರಿ ವಹಿಸಿಕೊಳ್ಳಲು ರೆಡಿಯಾಗಿದ್ದು ಸೀಸನ್ 8 ರ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇನ್ನು ಸುಮಾರು 500 ಎಪಿಸೋಡ್ಗಳಷ್ಟು ಪ್ರಸಾರ ಕಂಡಿದ್ದ ಮಜಾ ಟಾಕೀಸ್ ಕೂಡಾ ಮತ್ತೆ ಆರಂಭವಾಗಲಿದೆಯಂತೆ. ಹಿಂದಿಯ ಕಪಿಲ್ ಶರ್ಮ ಅವರ ಕಾಮಿಡಿ ವಿತ್ ಕಪಿಲ್ ಮಾದರಿಯಂತೆ ಮಜಾ ವಿತ್ ಸೃಜಾ ಪ್ರಸಾರವಾಗಿ ಜನರ ಮೆಚ್ಚುಗೆ ಗಳಿಸುವಲ್ಲಿ ಕೂಡಾ ಯಶಸ್ವಿಯಾಗಿತ್ತು. 2015 ರಿಂದ 2019 ವರೆಗೆ ಪ್ರಸಾರವಾಗಿದ್ದ ಈ ಕಾರ್ಯಕ್ರಮ ಇದೇ ತಿಂಗಳು ವೀಕ್ಷಕರನ್ನು ರಂಜಿಸಲು ಬರಲಿದೆ ಎನ್ನಲಾಗುತ್ತಿದೆ.