ಈ ಮುದ್ದುಮುಖದ ಹುಡುಗಿ ಹೆಸರು ನಿತ್ಯಾರಾಮ್. ಬಾಲ್ಯದಿಂದಲೂ ನಟಿ ಆಗಬೇಕು ಎಂದು ಕನಸು ಕಂಡಿದ್ದ ನಿತ್ಯಾಗೆ ನಟಿಯಾಗಲು ಸಹಾಯ ಮಾಡಿದ್ದೇ ಆಕೆಯ ಮುದ್ದು ಮುಖ. ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟಿಯಾಗುವ ಕನಸು ಈಡೇರಿಸಿಕೊಂಡಿದ್ದಾರೆ ನಿತ್ಯಾ.
ತನಗಿರುವ ಆಸೆಯನ್ನು ಹೆತ್ತವರ ಬಳಿ ಹೇಳಿಕೊಂಡಾಗ ಶಿಕ್ಷಣ ಮುಗಿಯಲಿ ಎಂದು ಹೇಳಿದ್ದಾರೆ. ಅದಕ್ಕೆ ಅಸ್ತು ಎಂದ ನಿತ್ಯಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕಾಲೇಜು ಶಿಕ್ಷಣ ಮುಗಿದ ಬಳಿಕ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಕನಸಿನ ಕಣ್ಮಣಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಿತ್ಯಾ ರಾಮ್ ಮುಂದೆ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಆ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಚೆಲುವೆ ಮುಂದೆ ರಾಜಕುಮಾರಿ, ಕರ್ಪೂರದ ಗೊಂಬೆ ಧಾರಾವಾಹಿಯಲ್ಲಿ ನಟಿಸಿದರು. 'ನಂದಿನಿ' ಧಾರಾವಾಹಿ ಭಾಗ -1 ರಲ್ಲಿ ಗಂಗಾ ಆಗಿ ನಟಿಸಿದ್ದ ನಿತ್ಯಾ ಇದೀಗ ಭಾಗ 2 ರಲ್ಲಿ ಜನನಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾರೆ. ಸಹೋದರಿ ರಚಿತಾ ರಾಮ್ ಈಗಾಗಲೇ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ.
ಕನ್ನಡದ ಜೊತೆಗೆ ತೆಲುಗು, ತಮಿಳು ಧಾರಾವಾಹಿಗಳಿಗೂ ಬಣ್ಣ ಹಚ್ಚಿರುವ ನಿತ್ಯಾರಾಮ್ ‘ಅವಳ್’, ‘ಮುದ್ದು ಬಿಡ್ಡ’(ದ್ವಿಪಾತ್ರ), ‘ಅಮ್ಮ ನಾ ಕೊಡಾಲ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮನ ಸೆಳೆದಿರುವ ನಿತ್ಯಾ ರಾಮ್ ಸದ್ಯ ಜನನಿಯಾಗಿ ಬ್ಯುಸಿ. ನಟನೆ ಜೊತೆಗೆ ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ನಿತ್ಯಾರಾಮ್ ಸದ್ಯ ಜನನಿ ಎಂದೇ ಚಿರಪರಿಚಿತ. ಈ ಮೊದಲು ನಿತ್ಯಾ ಅವರನ್ನು ನೋಡಿ ಯಾರಾದರೂ 'ನೀವು ನಂದಿನಿ ಧಾರಾವಾಹಿಯ ಗಂಗಾ ಅಲ್ಲವಾ' ಎಂದು ಕೇಳಿದಾಗ ನಿತ್ಯಾ ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸುತ್ತಿತ್ತಂತೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿ ಬಿಟ್ಟಿತ್ತು ಆ ಪಾತ್ರ. ನಿತ್ಯಾಗೆ ಸಿನಿಮಾಗಳಿಂದ ಆಫರ್ ಬರುತ್ತಿದ್ದರೂ ಧಾರಾವಾಹಿಯಲ್ಲಿ ಬ್ಯುಸಿ ಇರುವ ಕಾರಣ ಡೇಟ್ಸ್ ಹೊಂದಿಕೆಯಾಗುತ್ತಿಲ್ಲ. ಉತ್ತಮ ಕಥೆಯೊಂದಿಗೆ ಬೆಳ್ಳಿತೆರೆಗೆ ಬರುತ್ತೇನೆ ಎನ್ನುತ್ತಾರೆ ನಿತ್ಯಾ.