ಚಾಲೆಂಜಿಂಗ್ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥಾನಕ ‘ಮುನಿರತ್ನ ಕುರುಕ್ಷೇತ್ರ’ ಇದೇ ಆ. 2 ರಂದು ಚಿತ್ರಮಂದಿರಗಗಳಿಗೆ ಲಗ್ಗೆ ಇಡುವ ನಿರೀಕ್ಷೆ ಇದೆ. ಬಿಗ್ ಬಜೆಟ್ ಚಿತ್ರ ಇದಾಗಿದ್ದು ದೇಶದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ತಿಂಗಳ ಕೊನೆಯಲ್ಲಿ (ಆ. 29 ರಂದು) ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಸಹ ಥಿಯೇಟರ್ಗೆ ಬರಲಿದೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಒಂದು ಪೌರಾಣಿಕ ಮತ್ತೊಂದು ಚಿತ್ರ ಮತ್ತೊಂದು ಕಾಲ್ಪನಿಕ ಕಥಾಹಂದರವುಳ್ಳ ಚಿತ್ರ ಇವೆರಡೂ ಆಗಸ್ಟ್‌ನಲ್ಲಿಯೇ ಬಿಡುಗಡೆಗೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ.
ಐದು ಭಾಷೆಗಳಲ್ಲಿ ಸ್ಯಾಂಡಲ್ವುಡ್ನ ಇಬ್ಬರು ಘಟಾನುಘಟಿ ನಟರುಗಳ ಸಿನಿಮಾಗಳು ಒಂದೇ ತಿಂಗಳಿನಲ್ಲಿ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳು ಭಾರಿ ನಿರೀಕ್ಷೆಯಲ್ಲಿದ್ದಾರೆ. ದೊಡ್ಡ ಬಜೆಟ್ನಲ್ಲಿ ತಯಾರಾದ ಪರಭಾಷಾ ಸಿನಿಮಾಗಳು ಸಹ ಇದೇ (ಆಗಸ್ಟ್) ತಿಂಗಳಲ್ಲಿ ತೆರೆಗೆ ಬರಲು ಉತ್ಸುಕವಾಗಿವೆ. ಒಂದು ರಿಲೀಫ್ ಏನಪ್ಪಾ ಅಂದ್ರೆ, ಆ. 15 ಕ್ಕೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ‘ಮಂಗಲ್ ಮಿಷನ್’ ಬಿಡುಗಡೆಯಾಗುತ್ತಿದ್ದರೆ, ಪ್ರಭಾಸ್ ಅಭಿನಯದ ‘ಸಾಹೋ’ ಬಿಡುಗಡೆಗೆ ದಿನಾಂಕವನ್ನು ಮುಂದೂಡಲಾಗಿದೆ.
ಆಗಸ್ಟ್‌ನಲ್ಲಿ ಸಾಲು ಸಾಲು ಹಬ್ಬಗಳಿವೆ. ಆಗಸ್ಟ್ ಶ್ರಾವಣ ಮಾಸ. ಸಾಲದೆಂಬಂತೆ ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ ಮೊದಲ ವಾರ ಚೌತಿ ಹಬ್ಬ, ಗೌರಿ ಹಬ್ಬಗಳು ಸಹ ಇವೆ. ಇವೆಲ್ಲದರ ನಡುವೆ ಈ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬರಲು ತಯಾರಿ ನಡೆಸಿವೆ.
ದರ್ಶನ್ ಹಾಗೂ ಸುದೀಪ್ ಸಿನಿಮಾಗಳು ಬಿಡುಗಡೆ ಅಂದ್ಮೇಲೆ ಇನ್ನಿತರ ಕೆಲವು ಸಿನಿಮಾಗಳು ಪಕ್ಕಕ್ಕೆ ಸರಿದಿರುತ್ತವೆ. ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸೆಪ್ಟೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನಾಲ್ಕು ವರ್ಷಗಳಿಂದ ಬಹಳ ಶ್ರಮ ವಹಿಸಿ ತಯಾರಾಗಿರುವ ಕೋಮಲ್ ಕುಮಾರ್ ಅವರ ‘ಕೆಂಪೇಗೌಡ 2’ ಸಿನಿಮಾ ಇದೇ ಆಗಸ್ಟ್ ತಿಂಗಳಿನಲ್ಲೇ ಬಿಡುಗಡೆ ಎಂದು ಹೇಳಲಾಗುತ್ತಿದೆ.