ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬ ವಿಚಾರ ಇತ್ತೀಚೆಗೆ ಚರ್ಚೆಯಾಗುತ್ತಿರುವ ವಿಚಾರ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ನನಗೆ ಗೊತ್ತು ಎಂದು ಹೇಳಿದ್ದ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳ ಮುಂದೆ ಕೆಲವೊಂದು ಸಾಕ್ಷ್ಯಾಧಾರಗಳನ್ನು ನೀಡಿದ್ದರು. ಈ ಬಗ್ಗೆ ಕಿರುತೆರೆ ನಟಿ ಆಶಿತ ಚಂದ್ರಪ್ಪ ಮಾತನಾಡಿದ್ದಾರೆ.
'ನಾನು ಡ್ರಗ್ಸ್ ಮಾಫಿಯಾ ಅನುಯಾಯಿ ಅಲ್ಲ. ಆದರೆ ವಾಹಿನಿಗಳು ಈ ಹಗರಣದಲ್ಲಿ ಚಿರಂಜೀವಿ ಸರ್ಜಾ ಹೆಸರು ತರುತ್ತಿರುವ ವಿಚಾರ ಕೇಳಿ ಬಹಳ ಬೇಸರವಾಯ್ತು. ನಿಧನರಾದವರ ಹೆಸರನ್ನು ಈ ರೀತಿಯ ಪ್ರಕರಣಗಳಲ್ಲಿ ಎಳೆ ತರುತ್ತಿರುವುದು ತಪ್ಪು. ಚಿರಂಜೀವಿ ಅವರು ನಟನಾಗಿ ಕರಿಯರ್ ಆರಂಭಿಸುವುದಕ್ಕಿಂತ ಮೊದಲಿನಿಂದ ನನಗೆ ಅವರ ಬಗ್ಗೆ ಗೊತ್ತು. ಚಿರಂಜೀವಿ ಬಹಳ ಒಳ್ಳೆಯವರು. ಈ ಜಾಲದಲ್ಲಿ ಚಿರು ಭಾಗಿಯಾಗಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಇನ್ನೊಬ್ಬರ ಹೆಸರಿಗೆ ಮಸಿ ಬಳಿಯಬೇಡಿ' ಎಂದು ಆಶಿತಾ ಹೇಳಿದ್ದಾರೆ.
'ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಗೆ ಬಂದಿಲ್ಲ . ಈ ವಿಷಯದಲ್ಲಿ ಸುದ್ದಿ ವಾಹಿನಿಗಳು ಚಿರು ಹೆಸರು ತರುತ್ತಿರುವುದು ಅಮಾನವೀಯ ಕೆಲಸ ಎಂದು ನನಗೆ ಅನಿಸುತ್ತಿದೆ. ಇದು ಅವರ ಮನೆಯವರಿಗೆ ಬೇಸರ ಉಂಟು ಮಾಡುತ್ತಿದೆ. ಇದರಲ್ಲಿ ಸೆಲಬ್ರಿಟಿಗಳನ್ನು ಮಾತ್ರ ಎಳೆದು ತರುತ್ತಿದ್ದಾರೆ. ಬೇರೆಯವರು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲವೇ..? ತುಂಬಾ ಮಂದಿ ಈ ಹಗರಣದ ಹಿಂದೆ ಇದ್ದಾರೆ. ಅವರನ್ನು ಯಾಕೆ ಹೈಲೈಟ್ ಮಾಡಲಾಗುತ್ತಿಲ್ಲ? ಸ್ಯಾಂಡಲ್ವುಡ್ ಕಲಾವಿದರನ್ನು ಮಾತ್ರ ಏಕೆ ಗುರಿ ಮಾಡಲಾಗುತ್ತಿದೆ..?' ಎಂದು ಆಶಿತಾ ಪ್ರಶ್ನಿಸಿದ್ದಾರೆ.
ಇನ್ನು ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಬಗ್ಗೆ ಕೂಡಾ ಪ್ರತಿಕ್ರಿಯಿಸಿರುವ ಆಶಿತಾ, ಇಂದ್ರಜಿತ್ ಸೆಲಬ್ರಿಟಿಗಳ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ಅವರಿಗೆ ಬೇರೆ ರಂಗದಲ್ಲಿ ಅನೇಕ ಗಣ್ಯರು ಗೊತ್ತು. ಅವರ ಹೆಸರು ಏಕೆ ಹೇಳುತ್ತಿಲ್ಲ...? ಡ್ರಗ್ ಮಾಫಿಯಾಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಗೊತ್ತಿದೆ. ಮೊದಲಿನಿಂದ ಸುಮ್ಮನಿದ್ದು ಈಗ ನಾನು ಹೆಸರು ಹೇಳುತ್ತೇನೆಂದು ಮುಂದೆ ಬಂದಿದ್ದಾರೆ. ಮೊದಲೇ ಇಂದ್ರಜಿತ್ ಲಂಕೇಶ್ ಈ ಕೆಲಸ ಮಾಡಿದ್ದರೆ ನಾನು ಅವರನ್ನು ಗೌರವಿಸುತ್ತಿದ್ದೆ' ಎಂದು ಆಶಿತಾ ಬೇಸರ ವ್ಯಕ್ತಪಡಿಸಿದ್ದಾರೆ.