ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ವಿಲನ್ ದೀಪಿಕಾ ಆಗಿ ನಟಿಸಿ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಚೆಲುವೆ ಹೆಸರು ಅನುಷಾ ಹೆಗ್ಡೆ. 'ರಾಧಾ ರಮಣ' ಧಾರಾವಾಹಿಯ ನಂತರ ತೆಲುಗಿನ 'ಸೂರ್ಯಕಾಂತಂ' ಧಾರಾವಾಹಿಯಲ್ಲಿ ಸೂರ್ಯ ಪಾತ್ರಕ್ಕೆ ಜೀವ ತುಂಬುತ್ತಿರುವ ಅನುಷಾ ಹೆಗ್ಡೆ ಡಿಫರೆಂಟ್ ಲುಕ್ನಲ್ಲಿ ಕಂಗೊಳಿಸುತ್ತಿದ್ದಾರೆ.
![Anusha hegde](https://etvbharatimages.akamaized.net/etvbharat/prod-images/kn-bng-02-anushahegde-photo-ka10018_05022020182529_0502f_1580907329_1096.jpg)
ಸದಾ ಕಾಲ ಟೀ ಶರ್ಟ್, ಪ್ಯಾಂಟ್ ಜೊತೆಗೆ ಬಾಬ್ ಕಟ್ ಹೇರ್ಸ್ಟೈಲ್ ಮಾಡಿಕೊಂಡಿರುವ ಸೂರ್ಯ ಲುಕ್ಗೆ ಕಿರುತೆರೆ ಪ್ರಿಯರು ಮನ ಸೋತಿದ್ದಾರೆ. ಟಾಮ್ ಬಾಯ್ ಲುಕ್ನಲ್ಲಿ ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಅನುಷಾ ಹೆಗ್ಡೆ ಮೊದಲ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು 'ರಾಧಾ ರಮಣ' ಧಾರಾವಾಹಿ ಮೂಲಕ. ನಟಿಸಿದ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದ ಅನುಷಾ ಹೆಗ್ಡೆ 'ಎನ್ಹೆಚ್ 37' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.
![Radha Ramana](https://etvbharatimages.akamaized.net/etvbharat/prod-images/kn-bng-02-anushahegde-photo-ka10018_05022020182529_0502f_1580907329_326.jpg)
ಅನುಷಾ ಅದ್ಭುತ ಭರತನಾಟ್ಯ ಕಲಾವಿದೆ ಕೂಡಾ ಹೌದು. ನೃತ್ಯ ಎಂದರೆ ನನಗೆ ಬಹಳ ಇಷ್ಟ ಎನ್ನುವ ಅನುಷಾ ಹೆಗ್ಡೆ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಕೂಡಾ ಪಡೆದಿದ್ದಾರೆ. ಈಗಾಗಲೇ ಸುಮಾರು 800 ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುವ ಅನುಷಾ ಹೆಗ್ಡೆ 'ಬಣ್ಣದ ಬದುಕು' ಸಿನಿಮಾದಲ್ಲಿ ನೃತ್ಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕೂಡಾ ನಟಿಸಿದ್ದಾರೆ. ನಾನಿಂದು ನಟನಾ ಲೋಕದಲ್ಲಿ ಸಲೀಸಾಗಿ ನಟಿಸುತ್ತಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಭರತನಾಟ್ಯ. ಭರತನಾಟ್ಯ ಕಲಿತವರಿಗೆ ನವರಸಗಳು ಬಹಳ ಸಲೀಸಾಗಿ ಬರುತ್ತದೆ. ಹಾಗಾಗಿ ನಟಿಸಲು ಕಷ್ಟವೇ ಆಗಲಿಲ್ಲ ಎಂದು ಹೇಳುವ ಅನುಷಾ ತೆಲುಗಿನ 'ನಿನ್ನೇ ಪೆಳ್ಳಾಡತಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರತಾಪ್ ಸಿಂಗ್ ಶಾ ಅವರನ್ನು ಪ್ರೀತಿಸುತ್ತಿದ್ದು ಇತ್ತೀಚೆಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.