ಅನಂತನಾಗ್ ಭಾರತೀಯ ಚಿತ್ರರಂಗದಲ್ಲಿ 4 ದಶಕಗಳನ್ನ ಪೂರೈಸಿದ ಮಹಾನ್ ನಟ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅಂತಾನೇ ಖ್ಯಾತಿ ಹೊಂದಿರುವ ನಟ ಅನಂತನಾಗ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಕೋಟ್ಯಂತರ ಜನರ ಮನಸ್ಸು ಕದ್ದಿದ್ದಾರೆ.
74 ವರ್ಷವಾದ್ರು ಸಹ ಇಂದಿಗೂ ಹೀರೋನಂತೆ ಬೆಳ್ಳಿ ತೆರೆ ಮೇಲೆ ಮಿಂಚುತ್ತಿರುವ ಅನಂತನಾಗ್, ಸದ್ಯಕ್ಕೆ 'ದೃಶ್ಯ 2', 'ಮೇಡ್ ಇನ್ ಬೆಂಗಳೂರು' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಮೇಡ್ ಇನ್ ಬೆಂಗಳೂರು' ಸಿನಿಮಾದ ಕುರಿತು ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆದಿದ್ದು, ಅನಂತನಾಗ್ ಅವರು ಪಾತ್ರದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಹೋದರ ಶಂಕರನಾಗ್ ಕುರಿತಾದ ಕೆಲವೊಂದು ವಿಚಾರಗಳನ್ನು ಬಿಚ್ಚಿಟ್ಟರು.
ದಿವಂಗತ ಗಿರೀಶ್ ಕಾರ್ನಾಡ್ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರನಾಗ್ ಅಭಿನಯಿಸುವುದಕ್ಕೆ ಮುಖ್ಯ ಕಾರಣ ಅನಂತನಾಗ್ ಅಂತೆ. ಈ ಮಾತನ್ನು ಸ್ವತಃ ಅನಂತನಾಗ್ ಅವರೇ ಒಪ್ಪಿಕೊಂಡರು. ಶಂಕರನಾಗ್ ಹೀರೋ ಆಗುವುದಕ್ಕೆ ಚಿತ್ರರಂಗಕ್ಕೆ ಬಂದಿರಲಿಲ್ಲ, ನಿರ್ದೇಶಕನಾಗಬೇಕು ಅಂದುಕೊಂಡು ಚಿತ್ರರಂಗಕ್ಕೆ ಬಂದಿದ್ದ. ಆದರೆ ಗಿರೀಶ್ ಕಾರ್ನಾಡ್ ಅವರ ಕೋಪ ಹಾಗು ಅಣ್ಣ ಅನಂತನಾಗ್ ಮಾತಿಗೆ ಬೆಲೆ ಕೊಟ್ಟು 'ಒಂದಾನೊಂದು ಕಾಲದಲ್ಲಿ' ಸಿನಿಮಾದಲ್ಲಿ ಶಂಕರನಾಗ್ ಬಣ್ಣಹಚ್ಚಿದ್ರಂತೆ.
'ಮಿಂಚಿನ ಓಟ' ಸಿನಿಮಾ ಮೂಲಕ ನಿರ್ದೇಶನದ ಹೊಣೆ ಹೊತ್ತುಕೊಂಡ ಶಂಕರನಾಗ್ ಬಳಿ ಅಷ್ಟೊಂದು ಹಣವಿರಲಿಲ್ಲ. ಆಗ ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ ಪ್ರಸಿದ್ಧಿ ಹೊಂದಿದ್ದ ಪಾಲು ಚಂದಾನಿ ಎಂಬುವರಿಂದ 10 ಲಕ್ಷ ರೂಪಾಯಿ ಪಡೆದಿದ್ದೆ ಎಂದು ಹಳೆ ನೆನಪುಗಳನ್ನು ಅನಂತನಾಗ್ ಹಂಚಿಕೊಂಡರು.