ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ವಿಲನ್ ರಾಕಿ ಆಗಿ ನಟಿಸುತ್ತಿರುವ ಅಜಯ್ ರಾಜ್, ಕಿರುತೆರೆ ಲೋಕದ ನಂಜುಂಡ ಎಂದೇ ಫೇಮಸ್. ಟಿ.ಎನ್ . ಸೀತಾರಾಮ್ ನಿರ್ದೇಶನದ 'ಮುಕ್ತ' ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿ ಸೈ ಎನಿಸಿಕೊಂಡಿರುವ ಅಜಯ್ ರಾಜ್, ಇದೀಗ ಡಿಫರೆಂಟ್ ಲುಕ್ನಲ್ಲಿ ಪ್ರೇಕ್ಷಕರ ಮನ ಸೆಳೆಯುತ್ತಿದ್ದಾರೆ.

'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರ್ ಆಗಿ ಅಭಿನಯಿಸಿದ್ದ ಅಜಯ್ ರಾಜ್ ಅವರನ್ನು ನೋಡಿದ ಕೂಡಲೇ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ನಂಜುಂಡನ ಪಾತ್ರ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರನ್ನು ಸೆಳೆದುಬಿಟ್ಟಿತ್ತು. ನಾಟಕವೊಂದರಲ್ಲಿ ಶಕುನಿ ಎಂಬ ಏಕಪಾತ್ರಾಭಿನಯದಲ್ಲಿ ನಟಿಸುವ ಮೂಲಕ ಬಣ್ಣದ ಯಾನ ಆರಂಭಿಸಿದ ಅಜಯ್ ರಾಜ್ ಅವರಿಗೆ ನಟನೆ ರಕ್ತಗತವಾಗಿ ಬಂದಿದೆ. ಅಜಯ್ ಅಜ್ಜ ಅಜ್ಜಿ ಕೂಡಾ ರಂಗಭೂಮಿ ಕಲಾವಿದರು. ಅಜಯ್ ರಾಜ್ ಕೇವಲ ಕನ್ನಡ ನಾಟಕಗಳಲ್ಲಿ ಮಾತ್ರವಲ್ಲದೆ, ತಮಿಳು,ಹಿಂದಿ ಭಾಷೆಯ ನಾಟಕಗಳಲ್ಲೂ ನಟಿಸಿದ್ದಾರೆ. ಹಿರಿಯ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರ ನಾಟಕತಂಡದಲ್ಲಿ ಗುರುತಿಸಿಕೊಂಡಿರುವ ಅಜಯ್ ರಾಜ್ ಅವರು ಮುಕ್ತ, ಮನ್ವಂತರ ಸೇರಿ ಸುಮಾರು 15 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಅಭಿನಯಿಸಿರುವ ಅಜಯ್ ರಾಜ್ ಪ್ರದೇಶ ಸಮಾಚಾರ, ಡೈಮಂಡ್ ಕ್ರಾಸ್, ಮುಂದಿನ ನಿಲ್ದಾಣ ಸೇರಿ ಕೆಲವೊಂದು ನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. 'ಮುಕ್ತ' ಧಾರಾವಾಹಿಯ ನಂಜುಂಡ ಪಾತ್ರದ ನಂತರ ಕನ್ನಡ ಭಾಷೆಯಿಂದ ಬ್ರೇಕ್ ತೆಗೆದುಕೊಂಡ ಅಜಯ್ ತಮಿಳು ಸಿನಿರಂಗದಲ್ಲಿ ಸಕ್ರಿಯರಾಗಿದ್ದರು. ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಸಿನಿಮಾದಲ್ಲಿ ಕೂಡಾ ಬಣ್ಣ ಹಚ್ಚಿರುವ ಅಜಯ್ , ನಿರ್ದೇಶಕ ವೆಟ್ರಿಮಾರನ್ ಅವರ ಚಿತ್ರದಲ್ಲೂ ಎರಡನೇ ನಾಯಕನಾಗಿ ಮಿಂಚಿದ್ದಾರೆ. ಇದೀಗ 'ರಾಕಿ' ಎಂಬ ರಗಡ್ ಲುಕ್ನಲ್ಲಿ ಅಭಿನಯಿಸಿರುವ ಅಜಯ್ ರಾಜ್ ಅವರ ಹೊಸ ಅವತಾರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ನಂಜುಂಡ ಪಾತ್ರದ ಹಾಗೆಯೇ ರಾಕಿ ಪಾತ್ರವನ್ನು ಕೂಡಾ ಜನ ಸ್ವೀಕರಿಸಿರುವುದು ಖುಷಿಯ ವಿಚಾರ.
