ಕನ್ನಡದೊಂದಿಗೆ ತೆಲುಗು, ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಐಶ್ವರ್ಯ ಪಿಸ್ಸೆ ತೆಲುಗಿನಲ್ಲಿ ಆರಂಭವಾಗಿರುವ 'ಕಸ್ತೂರಿ' ಎಂಬ ಧಾರಾವಾಹಿಯಲ್ಲಿ ಡಾಕ್ಟರ್ ಆಗಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಐಶ್ವರ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಐಶ್ವರ್ಯಾಗೆ ತೆಲುಗು ಕಿರುತೆರೆ ಹೊಸದೇನಲ್ಲ. ಇದಕ್ಕೂ ಮುನ್ನ ತೆಲುಗಿನ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಐಶ್ವರ್ಯ ಗೌರಿಯಾಗಿ ನಟಿಸಿದ್ದರು. 'ಪುನರ್ ವಿವಾಹ' ಧಾರಾವಾಹಿಯ ಸಣ್ಣ ಪಾತ್ರದ ಮೂಲಕ ಕಿರುತೆರೆಗೆ ಬಂದ ಐಶ್ವರ್ಯ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು 'ಅನುರೂಪ' ಧಾರಾವಾಹಿಯಲ್ಲಿ. ಅನುರೂಪದಲ್ಲಿ ಮೇಘನಾ ಆಗಿ ನಟಿಸಿದ ನಂತರ ಪೌರಾಣಿಕ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿರಿಜಾ ಕಲ್ಯಾಣ'ದಲ್ಲಿ ಅಭಿನಯಿಸಿದ ಐಶ್ವರ್ಯಾ ಮತ್ತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಟಿಸಿ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದಲ್ಲಿ ಯಶ್ ತಂಗಿಯಾಗಿ ಕಾಣಿಸಿಕೊಂಡಿದ್ದರು.
ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಬೇಕು ಎಂಬ ಆಸೆ ಹೊಂದಿರುವ ಈಕೆ ತಮಿಳು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ಪ್ರಸಾರ ನಿಲ್ಲಿಸಿದ್ದು ಐಶ್ವರ್ಯ ತೆಲುಗು ಕಿರುತೆರೆಯತ್ತ ಮುಖ ಮಾಡಿದ್ದಾರೆ.