ಮಗಳು ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಅಮ್ಮನಿಗಿದ್ದ ಕನಸು. ಪ್ರೀತಿಯ ಅಮ್ಮನ ಕನಸನ್ನು ನನಸು ಮಾಡಿರುವ ಈಕೆ ಕನ್ನಡ ಕಿರುತೆರೆ ಮಾತ್ರವಲ್ಲ ತೆಲುಗು ಕಿರುತೆರೆಯ ಜನಪ್ರಿಯ ನಟಿಯೂ ಹೌದು.
ಈಕೆಯ ಹೆಸರು ಶೋಭಾ ಶೆಟ್ಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿಯ ತಂಗಿ ತನು ಆಗಿ ನಟಿಸಿದ್ದ ಹುಡುಗಿ. ಶೋಭಾ ಶೆಟ್ಟಿ ಕಿರುತೆರೆ ಯಾನಕ್ಕೆ ಮುನ್ನುಡಿ ಬರೆದದ್ದು 'ಪಡುವಾರಳ್ಳಿ ಪಡ್ಡೆಗಳು' ಧಾರಾವಾಹಿ. ಈ ಧಾರಾವಾಹಿಯ ನಂತರ ಶೋಭಾ ಬಣ್ಣ ಹಚ್ಚಿದ್ದು ಪೌರಾಣಿಕ ಧಾರಾವಾಹಿಗೆ. 'ಗುರು ರಾಘವೇಂದ್ರ ವೈಭವ' ಧಾರಾವಾಹಿಯಲ್ಲಿ ಪಂಕಜ ಪಾತ್ರಕ್ಕೆ ಜೀವ ತುಂಬಿದ ಈಕೆ ಮತ್ತೆ ಅಭಿನಯಿಸಿದ್ದು ಕಾರ್ತಿಕ ದೀಪದಲ್ಲಿ. ಚೆಲುವಿ ಮತ್ತು ಭೂತ ಎಂಬ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶೋಭಾ ನಂತರ 'ದೀಪವೂ ನಿನ್ನದೇ ಗಾಳಿಯು ನಿನ್ನದೇ', 'ಗೃಹಲಕ್ಷ್ಮಿ' ಮತ್ತು 'ಅಗ್ನಿಸಾಕ್ಷಿ'ಯಲ್ಲಿ ಅಭಿನಯಿಸಿದ್ದರು.
ಸದ್ಯಕ್ಕೆ ತೆಲುಗು ಕಿರುತೆರೆಯಲ್ಲಿ ತಮ್ಮ ನಟನಾ ಛಾಪನ್ನು ಮೂಡಿಸುತ್ತಿರುವ ಇವರನ್ನು ಜನ ಇಂದು ಮರೆತಿಲ್ಲ ಎಂದರೆ ಅದಕ್ಕೆ 'ಅಗ್ನಿಸಾಕ್ಷಿ' ಧಾರಾವಾಹಿಯೇ ಕಾರಣ. ಆಕಸ್ಮಿಕವಾಗಿ ನಟನಾ ರಂಗಕ್ಕೆ ಬಂದ ಶೋಭಾ ಶೆಟ್ಟಿ ಇಂಜಿನಿಯರಿಂಗ್ ಪದವೀಧರೆ. 'ನಟನೆ ಒಂದು ಅದ್ಭುತವಾದ ಕಲೆ ನಿಜ. ಹಾಗೆಂದ ಮಾತ್ರಕ್ಕೆ ಅದು ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಇನ್ನು ನಟನೆ ಎಂದರೇನು, ನಟಿಸಲು ಬೇಕಾಗಿರುವಂತಹ ರೀತಿ ನೀತಿಗಳೇನು ಎಂದು ಕಿಂಚಿತ್ತೂ ಅರಿಯದ ನಾನು ಇಂದು ಇಲ್ಲಿ ಮಿಂಚುತ್ತಿದ್ದೇನೆ ಎಂದರೆ ಕಲಾ ದೇವತೆ ನನಗೆ ಒಲಿದಿದ್ದಾಳೆ ಎಂದರ್ಥ' ಎನ್ನುತ್ತಾರೆ ಶೋಭಾ.
ನಟಿಯಾಗಿ ಗುರುತಿಸಿಕೊಂಡಿರುವುದಕ್ಕೆ ಬಹಳ ಸಂತಸವಾಗುತ್ತದೆ. ಅಮ್ಮನ ಕನಸನ್ನು ನನಸು ಮಾಡಿದ್ದೇನೆ ಎಂಬ ಸಮಾಧಾನ ಕೂಡಾ ಇದೆ ಎನ್ನುವ ಶೋಭಾ ಬಣ್ಣದ ಲೋಕವನ್ನು ಎಂಜಾಯ್ ಮಾಡುತ್ತಿದ್ದಾರೆ. 'ಜೇಮ್ಸ್ ಬಾಂಡ್', 'ಅಷ್ಟಚಮ್ಮ', 'ಲಹಿರಿ ಲಹಿರಿ ಲಹಿರಿಯೋ' ಸೇರಿ ಅನೇಕ ತೆಲುಗು ಧಾರಾವಾಹಿಯಲ್ಲಿ ಶೋಭಾ ಗುರುತಿಸಿಕೊಂಡಿದ್ದಾರೆ. ಅಂಜನಿಪುತ್ರ ಸಿನಿಮಾದಲ್ಲಿ ಪುನಿತ್ ರಾಜ್ಕುಮಾರ್ ತಂಗಿಯಾಗಿ ಕೂಡಾ ಶೋಭಾ ನಟಿಸಿದ್ದಾರೆ.