'ಅಗ್ನಿಸಾಕ್ಷಿ' , ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಈಗಾಗಲೇ ಯಶಸ್ವಿ 1500 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಈ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಏನೇ ಕೆಲಸವಿರಲಿ, ಎಲ್ಲೇ ಇರಲಿ ರಾತ್ರಿ 8 ಗಂಟೆಗೆ ಈ ಧಾರಾವಾಹಿ ನೋಡಲು ಟಿವಿ ಮುಂದೆ ಕೂರುವಷ್ಟು ಈ ಧಾರಾವಾಹಿ ಮೋಡಿ ಮಾಡಿದೆ.

ಸತತ 3 ವರ್ಷಗಳಿಂದ ರಾಜ್ಯದ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ನೀಡುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ತೆಲುಗಿಗೆ ಡಬ್ ಆಗುತ್ತಿದೆ. ಅದೂ ಕೂಡಾ 'ಮನಸ್ಸಾಕ್ಷಿ' ಹೆಸರಿನಲ್ಲಿ ಡಬ್ಬಿಂಗ್ ಮಾಡಲಾಗುತ್ತಿದೆ. ಕಲರ್ಸ್ ತೆಲುಗು ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡದ ಧಾರಾವಾಹಿಯೊಂದು ತೆಲುಗು ಭಾಷೆಗೆ ಡಬ್ ಆಗುತ್ತಿರುವುದು ಕನ್ನಡಿಗರಿಗೆ ನಿಜಕ್ಕೂ ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ನೂತನ ಅಧ್ಯಾಯದೊಂದಿಗೆ 'ಅಗ್ನಿಸಾಕ್ಷಿ' ಕನ್ನಡದಲ್ಲಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಇನ್ನು ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಈ ಧಾರಾವಾಹಿಯಿಂದ ಹೊರಬಂದ ಮೇಲೆ ಧಾರಾವಾಹಿಯನ್ನು ವೀಕ್ಷಕರು ತಿರಸ್ಕರಿಸುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಲೆಕ್ಕಾಚಾರವನ್ನು ಧಾರಾವಾಹಿ ಬುಡಮೇಲು ಮಾಡಿದೆ. ಮೊದಲಿಗಿಂತ ಈಗ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ. ಇನ್ನು ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ, ಸದ್ಯಕ್ಕೆ ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದು, ವಿಜಯ್ ಸೂರ್ಯ ಹಾಗೂ ಪ್ರಿಯಾಂಕ ಹೊರತುಪಡಿಸಿ ಉಳಿದೆಲ್ಲಾ ಪಾತ್ರಧಾರಿಗಳು ಧಾರಾವಾಹಿಯಲ್ಲಿದ್ದಾರೆ. ಧಾರಾವಾಹಿ ತೆಲುಗು ವೀಕ್ಷಕರನ್ನು ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.