ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಅನುಬಂಧ ಅವಾರ್ಡ್ ಜರುಗಿದೆ. ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಡುವ ಈ ಸಮಾರಂಭದಲ್ಲಿ ಧಾರಾವಾಹಿಯ ಅತ್ಯುತ್ತಮ ನಟಿ, ನಟ, ಅಪ್ಪ-ಅಮ್ಮ, ಅತ್ತೆ ಮಾವ, ಮನ ಮೆಚ್ಚಿದ ಹಿರಿಯ, ಖಳನಟಿ, ಖಳನಟ, ಸಹೋದರ, ಸಹೋದರಿ, ಧಾರಾವಾಹಿ, ನಾನ್ ಫಿಕ್ಷನ್ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
'ಜನ ಮೆಚ್ಚಿದ ಮಂಥರೆ' ಪ್ರಶಸ್ತಿಯನ್ನು ಅಗ್ನಿಸಾಕ್ಷಿಯ ಚಂದ್ರಿಕಾ ಪಡೆದಿದ್ದಾರೆ. ಕಳೆದ ಬಾರಿ ಕೂಡಾ ಚಂದ್ರಿಕಾಗೆ ಅದೇ ಪ್ರಶಸ್ತಿ ದೊರೆತಿತ್ತು. ಚಂದ್ರಿಕಾ ಪಾತ್ರ, ನಾಯಕಿ ಸನ್ನಿಧಿ ಪಾತ್ರಕ್ಕೆ ಪೈಪೋಟಿ ಕೊಡುವಂತಿದೆ. ಇನ್ನು 'ಜನ ಮೆಚ್ಚಿದ ಮಂಥರೆ' ಪ್ರಶಸ್ತಿ ಸ್ವೀಕರಿಸಿದ ಚಂದ್ರಿಕಾ ಆಲಿಯಾಸ್ ಪ್ರಿಯಾಂಕ ಪ್ರಶಸ್ತಿಯನ್ನು ತಮ್ಮ ಪ್ರೀತಿಯ ತಂದೆಗೆ ಅರ್ಪಿಸಿದ್ದಾರೆ. 'ನಾನು ಈ ಪ್ರಶಸ್ತಿಯನ್ನು ತನ್ನ ತಂದೆಗೆ ಡೆಡಿಕೇಟ್ ಮಾಡುತ್ತೇನೆ. ಕಳೆದ ವರ್ಷವೂ ನನಗೆ ಪ್ರಶಸ್ತಿ ಬಂದಾಗ ಮಧ್ಯರಾತ್ರಿ ಮನೆಗೆ ಹೋಗಿ ತಂದೆಗೆ ತೋರಿಸಿ ಸಂಭ್ರಮಿಸಿದ್ದೆ. ಆದರೆ ಈ ವರ್ಷ ಅವರಿಲ್ಲ, ನಮ್ಮನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ನಾನು ಅವರ ಕಾರ್ಯ ಮಾಡಿ ಈ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ ಎಂದು ತಂದೆಯನ್ನು ನೆನೆದು ಭಾವುಕರಾದರು ಪ್ರಿಯಾಂಕ. ಆಕಸ್ಮಿಕವಾಗಿ ಬಂದ ಅವಕಾಶವನ್ನು ಒಲ್ಲೆ ಎನ್ನದೆ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾಂಕ ಇಂದು ಚಂದ್ರಿಕಾ ಎಂದೇ ಜನಪ್ರಿಯ. 'ಅವನು ಮತ್ತು ಶ್ರಾವಣಿ' 'ಒಂದೂರಲ್ಲಿ ರಾಜ ರಾಣಿ', 'ಪರಿಣಯ' ಧಾರಾವಾಹಿಯಲ್ಲಿ ಕೂಡಾ ಪ್ರಿಯಾಂಕ ಉತ್ತಮ ಅಭಿನಯ ನೀಡಿದ್ದಾರೆ. ನನಗೆ ನೆಗೆಟಿವ್ ಪಾತ್ರಗಳು ಎಂದರೆ ತುಂಬಾ ಇಷ್ಟ. ಅಳುವ ಪಾತ್ರಕ್ಕೂ ನನಗೂ ಆಗುವುದೇ ಇಲ್ಲ ಎನ್ನುತ್ತಾರೆ ಪ್ರಿಯಾಂಕ.