ನಟಿ ಪ್ರಿಯಾಂಕಾ ಚಿಂಚೋಳಿ ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳು ಬಾಕಿ ಇವೆ. ರಾಕೇಶ್ ಕುಮಾರ್ ಎಂಬುವರೊಂದಿಗೆ ಪ್ರಿಯಾಂಕ ಮದುವೆ ಫಿಕ್ಸ್ ಆಗಿದ್ದು ಫೆಬ್ರವರಿ 14 ಪ್ರೇಮಿಗಳ ದಿನದಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ಪ್ರಿಯಾಂಕಾಗೆ ಒಂದೆಡೆ ನಿಜಜೀವನದಲ್ಲಿ ನಿಶ್ಚಿತಾರ್ಥದ ಸಂಭ್ರಮ ಒಂದೆಡೆಯಾದರೆ, ರೀಲ್ನಲ್ಲೂ ಅಂದರೆ, 'ಮನಸಾರೆ' ಧಾರಾವಾಹಿಯಲ್ಲಿ ಕೂಡಾ ನಿಶ್ಚಿತಾರ್ಥದ ಶೂಟಿಂಗ್ ಮುಗಿಸಿದ್ದಾರೆ. ಈಗ ತಮ್ಮ ಜೀವನದ ಮಹತ್ವದ ದಿನದ ತಯಾರಿಯಲ್ಲಿದ್ದಾರೆ.
ಈ ಕುರಿತು ಮಾತನಾಡಿರುವ ನಟಿ ಪ್ರಿಯಾಂಕಾ " ನಾನು ಮನಸಾರೆ ಧಾರಾವಾಹಿಗಾಗಿ ನಿಶ್ಚಿತಾರ್ಥದ ದೃಶ್ಯದ ಶೂಟಿಂಗ್ ಮುಗಿಸಿದ್ದೇನೆ. ನನ್ನ ರೀಲ್ ಹಾಗೂ ರಿಯಲ್ ಲೈಫಿನ ನಿಶ್ಚಿತಾರ್ಥ ಒಂದೇ ಸಮಯದಲ್ಲಿ ನಡೆಯುತ್ತಿರುವುದು ಆಕಸ್ಮಿಕ. ಕೆಲವೇ ದಿನಗಳಲ್ಲಿ ನಡೆಯಲಿರುವ ನಿಜ ಜೀವನದ ನಿಶ್ಚಿತಾರ್ಥಕ್ಕೆ ಇದು ರಿಹರ್ಸಲ್ ಇದ್ದಂತಿದೆ. ನನ್ನ ಬದುಕಿನಲ್ಲಿ ಎಲ್ಲವೂ ವೇಗವಾಗಿ ನಡೆದುಹೋಯಿತು. ನಾನು ಇದನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಇದು ಬದುಕಿನಲ್ಲಿ ಅನುಭವಿಸಲು ವಿಭಿನ್ನವಾದ ಭಾವನೆ. ಇದು ಜೀವನದಲ್ಲಿ ಒಮ್ಮೆ ಬರುವ ಕ್ಷಣ. ಹೀಗಾಗಿ ಇದನ್ನು ಅತ್ಯುತ್ತಮ ಕ್ಷಣವನ್ನಾಗಿಸಲು ಬಯಸುತ್ತೇನೆ".
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ವಿವಾದ: ಸರ್ಕಾರದ ವಿರುದ್ಧ ಸ್ಯಾಂಡಲ್ವುಡ್ ಅಸಮಾಧಾನ!
"ನಾನು ಮನಸಾರೆ ಶೂಟಿಂಗ್ ಸಮಯವನ್ನು ವಿಸ್ತರಿಸಿಕೊಂಡಿದ್ದೇನೆ. ನಿಶ್ಚಿತಾರ್ಥದ ತಯಾರಿಯೂ ಮಾಡಿಕೊಂಡಿದ್ದೇನೆ. ನಾವು ನಮ್ಮ ಪ್ರೀತಿಯನ್ನು ಕೆಂಪು ಹಾಗೂ ಬಿಳಿ ಬಣ್ಣಗಳ ಥೀಮ್ ಮೂಲಕ ಆಚರಿಸಲು ನಿರ್ಧರಿಸಿದ್ದೇವೆ. ಇನ್ನೂ ಹಲವು ಸಿದ್ದತೆಗಳು ಬಾಕಿ ಇವೆ. ಆದಷ್ಟು ಬೇಗ ಎಲ್ಲಾ ತಯಾರಿ ಮುಗಿಸುತ್ತೇನೆ. ರಾಕೇಶ್ ಬಹಳ ಒಳ್ಳೆಯ ವ್ಯಕ್ತಿ. ಸಿನಿಮಾ, ಕಿರುತೆರೆ ಕ್ಷೇತ್ರದವರಲ್ಲದಿದ್ದರೂ ನನಗೆ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹ ನೀಡುತ್ತಾರೆ. ಬದುಕಿನ ಇನ್ನೊಂದು ಹಂತಕ್ಕೆ ಪ್ರವೇಶಿಸಲು ಕಾತರಳಾಗಿದ್ದೇನೆ" ಎಂದು ಪ್ರಿಯಾಂಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.