'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟು, ಮೊದಲ ಧಾರಾವಾಹಿಯಲ್ಲೇ ಸೀರಿಯಲ್ ಪ್ರಿಯರ ಮನ ಸೆಳೆದಿರುವ ನಟ ಸ್ಕಂದ ಅಶೋಕ್ ಧಾರಾವಾಹಿ ಮುಗಿಯುವ ಮುನ್ನವೇ ತಮ್ಮ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗೆ ಮಗಳು ಕೂಡಾ ಜನಿಸಿದ್ದು ಅಶೋಕ್ ಮೊದಲ ಬಾರಿಗೆ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

ಮನೆಗೆ ಪುಟ್ಟ ಲಕ್ಷ್ಮಿ ಆಗಮಿಸಿದ ವಿಚಾರವನ್ನು ಸ್ಕಂದ ಅಶೋಕ್ ಹಾಗೂ ಪತ್ನಿ ಶಿಖಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಮೊದಲ ಬಾರಿ ಅಶೋಕ್ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸ್ಕಂದ ಅಶೋಕ್ ದಂಪತಿ ಮಗುವಿನೊಂದಿಗೆ ಫೋಟೋಶೂಟ್ ಮಾಡಿಸಿದ್ದರು. ದೀಪಾವಳಿ ಹಬ್ಬದಂದು ಈ ಫೋಟೋಗಳನ್ನು ಹಂಚಿಕೊಂಡಿರುವ ಅಶೋಕ್, ''ದೀಪಾವಳಿ ಹಬ್ಬದ ಶುಭ ಸಂಭ್ರಮದಂದು ನಮ್ಮ ಮುದ್ದು ರಾಜಕುಮಾರಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ಪ್ರೀತಿ, ಸಂತಸ ಸದಾ ಕಾಲ ಹೀಗೆ ಇರಲಿ'' ಎಂದು ಸ್ಕಂದ ಬರೆದುಕೊಂಡಿದ್ದಾರೆ.

ಸ್ಯಾಂಡಲ್ವುಡ್ಗೆ ಕೂಡಾ ಕಾಲಿಟ್ಟಿರುವ ಸ್ಕಂದ ಅಶೋಕ್, ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಸಿನಿಮಾದಲ್ಲಿ ನಾಯಕ ಆಗಿ ನಟಿಸುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಆರಂಭವಾಗಿರುವ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
