ರಾಜ್ಯದ ನಾನಾ ಕಡೆಗಳಿಂದ ಕೆಲಸ ಹುಡುಕುತ್ತಾ ಬೆಂಗಳೂರಿಗೆ ಬಂದಿದ್ದ ಜನರು ಇದೀಗ ಕೊರೊನಾ ವೈರಸ್ಗೆ ಹೆದರಿ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಆಗೆಲ್ಲಾ ಬೆಂಗಳೂರು ಎನ್ನುತ್ತಿದ್ದವರು ಈಗ ನಮ್ಮ ಊರು ಎಂದು ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತಿದ್ದಾರೆ.
ಈ ಬಗ್ಗೆ ಕಿರುತೆರೆ ನಟ, 'ನಾ ನಿನ್ನ ಬಿಡಲಾರೆ ' ಖ್ಯಾತಿಯ ದೀಪಕ್ ಮಹಾದೇವ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಇಂದು ಬೆಂಗಳೂರು ಬೇಡ ಎಂದು ಬಿಟ್ಟು ಹೋಗುತ್ತಿರುವ ಜನರು ನಾಳೆ ಕೊರೊನಾ ಕಡಿಮೆಯಾದಾಗ ಮತ್ತೆ ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ವಾಪಸ್ ಬಂದು ಸೇರುತ್ತಾರೆ. ಈಗ ಬೇಡ ಎಂದು ಹೋದವರು ಕೆಲವು ದಿನಗಳ ನಂತರ ಬದುಕು ಕಟ್ಟಿಕೊಳ್ಳಲು ಸಾಮಾನು ಜೊತೆ ಮತ್ತೆ ವಾಪಸ್ ಬರುತ್ತಾರೆ. ಆದರೆ ನಾನು ಬೆಂಗಳೂರು ಬಿಟ್ಟು ಎಲ್ಲಿ ಹೋಗಲೂ ಇಷ್ಟಪಡುವುದಿಲ್ಲ. ಇಂದು ನನ್ನ ಬೆಂಗಳೂರು ಸೋಂಕಿಗೆ ಒಳಗಾಗಿದೆ. ನನ್ನ ಬೆಂಗಳೂರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಆದರೂ ನಾನು ಬೆಂಗಳೂರಿನಲ್ಲೇ ಇರುತ್ತೇನೆ. ಮುಂದೆಯೂ ಇಲ್ಲೇ ಬದುಕುತ್ತೇನೆ '.
'ಇದು ನನ್ನ ಬೆಂಗಳೂರು, ನನ್ನ ಕನಸಿನ ನಗರಿ, ನನ್ನ ಕನಸುಗಳನ್ನು ಈಡೇರಿಸಿದ ನಗರ , ನನ್ನ ನಗರವನ್ನು ಸಾಯಲು ಬಿಡುವುದಿಲ್ಲ ,ನಾನು ಹೋರಾಡುವೆ ,ಕಷ್ಟಪಡುವೆ . ನಾವೆಲ್ಲರೂ ಒಂದಾಗಿ ಜಯಿಸಬೇಕು, ಬೆಂಗಳೂರನ್ನು ಸಾಯಲು ಬಿಡಬಾರದು. ಬೆಂಗಳೂರು ಕೇವಲ ನನ್ನ ಹುಟ್ಟಿದ ಸ್ಥಳವಲ್ಲ ಅಥವಾ ನಾನು ಕೆಲಸ ಮಾಡುವ ಜಾಗವಲ್ಲ ,ನನ್ನ ಮನೆಯಲ್ಲ , ಅದೊಂದು ಭಾವನೆ, ಈ ದೇಶದ ಭಾಗ. ಬೆಂಗಳೂರು ನನ್ನ ಕುಟುಂಬ. ಐ ಲವ್ ಬೆಂಗಳೂರು' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ದೀಪಕ್.
'ನಾ ನಿನ್ನ ಬಿಡಲಾರೆ ' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ದೀಪಕ್, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ ' ಧಾರಾವಾಹಿಯಲ್ಲಿ ಕೂಡಾ ನಟಿಸಿದ್ದಾರೆ.