ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ (2006ರ ಪರುತ್ತಿವೀರನ್ ತಮಿಳು ಚಿತ್ರ) ಪ್ರಿಯಾಮಣಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ದಕ್ಷಿಣ ಭಾರತದ ಪ್ರಖ್ಯಾತ ನಟಿ.
ಕನ್ನಡದಲ್ಲಿ ‘ಡಾ 56’ ಚಿತ್ರದಲ್ಲಿ ನಟಿ ಪ್ರಿಯಾಮಣಿ ಸಿಬಿಐ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ. ತೆಲುಗು ಭಾಷೆಯಲ್ಲಿ ‘ನರಪ್ಪ’ (ಅಸುರನ್ ರೀಮೇಕ್), ‘ವಿರಾಟ ಪರ್ವಂ’ ಮತ್ತು 'ಮೈದಾನ್' ಹಿಂದಿ ಸಿನಿಮಾದಲ್ಲಿ ಕೂಡ ಅಭಿನಯಿಸಲಿದ್ದಾರೆ.
ಈ ಬಹು ಭಾಷಾ ನಟಿ ಪ್ರಿಯಾಮಣಿ ಈಗ 8 ವರ್ಷಗಳ ಬಳಿಕ ತಮಿಳಿನಲ್ಲಿ ‘ಕ್ವಟೇಷನ್ ಗ್ಯಾಂಗ್’ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಚಿತ್ರದಲ್ಲಿ ಕಂಟ್ರಾಕ್ಟ್ ಕಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಹ ಡಬ್ ಆಗಿ ಬರಲಿದೆ ಎಂದು ಚಿತ್ರದ ನಿರ್ಮಾಪಕರಾದ ಗಾಯತ್ರಿ ರೆಡ್ಡಿ ತಿಳಿಸಿದ್ದಾರೆ.
‘ಕ್ವಟೇಷನ್ ಗ್ಯಾಂಗ್’ ಚಿತ್ರವನ್ನು ಮುಂಬೈನ ಧರಾವಿಯಲ್ಲಿ ಚಿತ್ರೀಕರಣ ಮಾಡಲಾಗುವುದು. ವಿವೇಕ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಗಾಯತ್ರಿ ಸುರೇಶ್ ಇದಕ್ಕೆ ಬಂಡವಾಳ ಹೂಡಿದ್ದಾರೆ.