ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ತಬರನ ಕಥೆ’ ಅಂದ್ರೆ ಬಹಳ ಅಚ್ಚು ಮೆಚ್ಚು. ತಬರನ ಪಾತ್ರದ ಮೂಲಕ ಎಲ್ಲರನ್ನು ಮನರಂಜಿಸಿದ್ದ ಚಾರುಹಾಸನ್ ಮತ್ತೆ ಇದೀಗ ಬಣ್ಣ ಹಚ್ಚಲು ಮುಂದಾಗಿದ್ದಾರೆ.
ತಬರನ ಪಾತ್ರದ ಮೂಲಕ ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಲಾಗಿತ್ತು. ಆ ತಬರನ ಪಾತ್ರ (1987 ರಲ್ಲಿ) ಮಾಡಿದವರೆ ಚಾರುಹಾಸನ್. ಚಾರುಹಾಸನ್‌ಗೆ ಈ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ದೊರಕಿತು. ತಬರನ ಕಥೆ ನಂತರ ಕುಬಿ ಮತ್ತು ಉಯ್ಯಲಾ, ನೀಲಾಂಭಾರಿ, ದುರ್ಗಾ ಶಕ್ತಿ ಸಿನಿಮಾಗಳಲ್ಲಿ ಅಭಿನಯ ಮಾಡಿ ದಕ್ಷಿಣ ಭಾರತೀಯ ಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡಿದವರು.
ಚಾರುಹಾಸನ್‌ಗೆ ಈಗ 90 ವರ್ಷ. ಈ ವಯಸ್ಸಿನಲ್ಲಿ ಸಹ ಮತ್ತೆ ಅಭಿನಯ ಮಾಡಲು ಉತ್ಸಾಹ ತೋರಿದ್ದಾರೆ. ಅನೇಕ ವರ್ಷಗಳ ಬಳಿಕ ಅವರು ತಮಿಳಿನಲ್ಲಿ ‘ಧ ಧ 87’ ಇಂದ ವಾಪಸ್ಸಾಗಿದ್ದರು. ನಿರ್ದೇಶಕ ಹಾಗೂ ನಿರ್ಮಾಪಕ ವಿಜಯ್ ಶ್ರೀಜಿಯವರ ಚೊಚ್ಚಲ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಇದರಲ್ಲಿ ಚಾರುಹಾಸನ್ 87 ವರ್ಷದ ವ್ಯಕ್ತಿ ಪಾತ್ರ ನಿರ್ವಹಿಸಿದ್ದರು. ಇವರ ಜೋಡಿಯಾಗಿ ಸರೋಜ, ಈಗಿನ ಪ್ರಸಿದ್ದ ನಟಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರ ತಾಯಿ 80 ವರ್ಷದ ಪಾತ್ರ ನಿರ್ವಹಣೆ ಮಾಡಿದ್ದರು.
ನಿರ್ದೇಶಕ ಹಾಗೂ ನಿರ್ಮಾಪಕ ವಿಜಯ್ ಶ್ರೀಜಿ ಈಗ ಮತ್ತೆ ಚಾರುಹಾಸನ್ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ ಚಾರುಹಾಸನ್ ಅವರು 90ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಹುಲಿ, ಶಿವ ಸೇನೆಯ ಪ್ರಮುಖರಾಗಿದ್ದ ಬಾಲ್ ಠಾಕ್ರೆ ಹೋಲುವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಚಿತ್ರಕ್ಕೆ ಇನ್ನು ಹೆಸರು ಇಟ್ಟಿಲ್ಲ. ಈಗಾಗಲೇ ಲಾಕ್ ಡೌನ್ ಮುಂಚೆಯೇ ಏಳು ದಿವಸದ ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗದ ಚಿತ್ರೀಕರಣ ಲಾಕ್ ಡೌನ್ ಸಂಪೂರ್ಣ ಸಡಿಲವಾಗಿ ಕೊರೊನಾ ವೈರಸ್ ಹಾವಳಿಯಿಂದ ಮುಕ್ತವಾದ ಮೇಲೆ ಮಾಡಲಾಗುತ್ತದೆ ಎಂದು ನಿರ್ದೇಶಕ ವಿಜಯ್ ಶ್ರೀ ಜಿ ತಿಳಿಸಿದ್ದಾರೆ.