ಎರಡು ಸಾವಿರ ನೋಟಿನ ಕಥೆಯನ್ನು ಹೊಂದಿರುವ 'ಆ ಒಂದು ನೋಟು' ಸಿನಿಮಾದ ಟೈಟಲ್ ಹಾಡನ್ನು ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚೈತ್ರ ಹಾಗೂ ವೀರ್ ಸಮರ್ಥ ಗಾಯನದಲ್ಲಿ ಮೂಡಿಬಂದ ಹಾಡನ್ನು ಫ್ರೆಂಡ್ಸ್ ಫಿಲ್ಮ್ ಫ್ಯಾಕ್ಟರಿ ಅಡಿ ನಿರ್ಮಾಣ ಮಾಡಲಾಗಿದೆ. ‘ಆ ಒಂದು ನೋಟು’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ನೀಡಲಾಗಿದೆ.
ಹಾಸ್ಯ, ಸಸ್ಪೆನ್ಸ್ , ಕ್ರೈಂ, ಲವ್ ಒಳಗೊಂಡಿರುವ ಈ ಚಿತ್ರವನ್ನು ವಿಭಿನ್ನ ಶೈಲಿಯಲ್ಲಿ ನಿರೂಪಣೆ ಮಾಡಲಾಗಿದೆ. ಇದರಲ್ಲಿ 2000 ರೂಪಾಯಿ ನೋಟು ಪ್ರಧಾನ ಪಾತ್ರ ವಹಿಸಿದ್ದು, ಚಿತ್ರದ ಮಿಕ್ಕ ಎಲ್ಲ ಪಾತ್ರಗಳು ಈ ನೋಟಿನ ಸುತ್ತ ಸುತ್ತುತ್ತಿರುತ್ತದೆ. ಸುಮಾರು 75 ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿಕ್ಕಮಗಳೂರು, ಕೆಮ್ಮಣ ಗುಂಡಿ ಅರಣ್ಯ ಪ್ರದೇಶಗಳಲ್ಲಿ, ಬೆಂಗಳೂರಿನ ಮಾರುಕಟ್ಟೆ, ಬಾರ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಎಂ.ಕೆ ಜಗದೀಶ್ ಮತ್ತು ಜಿ.ಪ್ರೇಮನಾಥ್ ನಿರ್ಮಾಣದ ಚಿತ್ರಕ್ಕೆ ರತ್ನಾತನಯ ನಿರ್ದೇಶಕರಾಗಿದ್ದು, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ರವಿ ವರ್ಮಾ (ಗಂಗು) ಛಾಯಾಗ್ರಹಣ, ಕೌಶಿಕ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ದ.ರಾ ಬೇಂದ್ರೆ, ಕೆ. ಕಲ್ಯಾಣ್, ಹರೀಶ್ ಕೆ ಗೌಡ ಗೀತ ಸಾಹಿತ್ಯ. ವೀರ ಸಮರ್ಥ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ಇನ್ನು ಸಿನಿಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಾಲರಜವಾಡಿ, ಗೌತಮ್, ಜಗದೀಶ್, ಎಂ.ಕೆ ಅಕ್ಷತಾ ಪಾಂಡವಪುರ, ಅಶ್ವಿನ್ ಹಾಸನ್, ಆದಿತ್ಯ,ಶೆಟ್ಟಿ, ಮೇಘ, ಉಷಾ, ರವಿಶಂಕರ್, ಸಿಲ್ಲಿ ಲಲ್ಲಿ ಆನಂದ್, ಜಯರಾಂ ಹಾಗೂ ಮುಂತಾದವರು ನಟಿಸಿದ್ದಾರೆ.