ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ನನ್ನ ಪ್ರಕಾರ ಸಿನಿಮಾ ಇಂದು ತೆರೆಕಂಡಿದೆ. ಈ ಚಿತ್ರದ ಮೊದಲಾರ್ಧ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ಗಳನ್ನಿಟ್ಟಿರುವ ನಿರ್ದೇಶಕ ವಿನಯ್ ಬಾಲಾಜಿ ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡಿ ಖುರ್ಚಿಯ ಅಂಚಿನಲ್ಲಿ ಕೂರಿಸಿಬಿಡ್ತಾರೆ. ಆಮೇಲೆ ನೋಡುಗರು ತನ್ನ ಪ್ರಕಾರ ಈ ಸಿನಿಮಾ ಮುಂದುವರೆಯಬಹುದಾ ಎಂದು ಊಹಿಸುತ್ತ ಸಿನಿಮಾ ನೋಡುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ವಿಸ್ಮಯ ಎಂಬ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು.
ಈ ಪಾತ್ರಗಳು ಚಿತ್ರದ ಕನ್ಫ್ಯೂಷನ್ ಲೆವೆಲ್ನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಮೇಲಾಮೇಲೆ ನಿರ್ದೇಶಕರೂ ದಿಕ್ಕು ಬದಲಿಸುತ್ತಾ, ಹಲವು ಟ್ವಿಸ್ಟ್ ಹಾಗೂ ಟರ್ನ್ಗಳನ್ನಿಟ್ಟು ಕಗ್ಗಂಟಾದ ಸನ್ನಿವೇಶಗಳನ್ನು ನಾಯಕ ಕಿಶೋರ್ ಮೂಲಕ ಸಂಭಾಷಣೆಯಲ್ಲಿ ಹೇಳಿಸುತ್ತಾ ದೃಶ್ಯಗಳನ್ನು ಜೋಡಿಸುತ್ತಾ ಹೋಗುತ್ತಾರೆ.
ಏನಿದು ನನ್ನ ಪ್ರಕಾರ?
ವಿಸ್ಮಯ (ಮಯೂರಿ) ಹಾಗೂ ಮತ್ತೋರ್ವ ವಿಸ್ಮಯ ಸುರೇಶ್. ಒಂದು ಅಚಾತುರ್ಯಕ್ಕೆ ಈ ಇಬ್ಬರು ಕನೆಕ್ಟ್ ಆಗಿರುತ್ತಾರೆ. ಆದರೆ, ಕೊಲೆ ಆಗಿರುವುದು ವಿಸ್ಮಯ ಸುರೇಶ್. ಈ ಕೊಲೆ ಮುಚ್ಚಿ ಹಾಕಲು ವೈದ್ಯನೋರ್ವ ತಪ್ಪು ಪೋಸ್ಟ್ ಮಾರ್ಟಮ್ ರಿಪೋರ್ಟ್ ನೀಡಿರುತ್ತಾನೆ. ಈ ಕೊಲೆಯನ್ನು ಭೇದಿಸಲು ಪೊಲೀಸ್ ಅಧಿಕಾರಿ ಅಶೋಕ್ (ಕಿಶೋರ್) ಮುಂದಾಗುತ್ತಾನೆ.
ಪೊಲೀಸ್ ವಿಚಾರಣೆ ಶುರುವಾದ ಮೇಲೆ ‘ನನ್ನ ಪ್ರಕಾರ’ ಚಿತ್ರಕ್ಕೆ ಮತ್ತಷ್ಟು ತಿರುವುಗಳು ಸಿಗುತ್ತವೆ. ಕೊನೆಗೆ ಪೊಲೀಸ್ ಪ್ರಕಾರ ಆದ ಕನ್ಫ್ಯೂಷನ್, ಕಗ್ಗಂಟು ಒಂದು ಅಂತ್ಯ ಕಾಣುತ್ತದೆ. ಅದು ಹೇಗೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಖಡಕ್ ಆಗಿ ಅಭಿನಯಿಸಿದ್ದಾರೆ. ಇಂತಹ ಪಾತ್ರ ಇವರಿಗೆ ಒಪ್ಪುತ್ತದೆ. ಪ್ರಿಯಾಮಣಿ ಅವರಿಗೆ ಹೆಚ್ಚಿನ ಪರಿಣಾಮಕಾರಿ ಪಾತ್ರ ಏನು ಇಲ್ಲ. ಮಯೂರಿ ಅವರಿಗೆ ಅಭಿನಯಿಸಲು ಅವಕಾಶ ಇದೆ, ಅದನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರ್ಜುನ್ ಯೋಗಿ ಬಿಕ್ಕಲು ಮಾತಿನಿಂದ, ಅವರ ಮುಗ್ದತೆಯಿಂದ ಇಷ್ಟ ಆಗುತ್ತಾರೆ. ನಿರಂಜನ್ ದೇಶಪಾಂಡೆ ಒದೆ ತಿನ್ನುವ ಪಾತ್ರ, ಗಿರಿಜಾ ಲೋಕೇಶ್ ಅಮ್ಮನಾಗಿ ಕೊರಗುವ ಪಾತ್ರ. ಪ್ರಮೋದ್ ಶೆಟ್ಟಿ ಅವರ ಸಾಮರ್ಥ್ಯಕ್ಕೆ ಅಂತಹ ದೊಡ್ಡ ಪಾತ್ರವೇನು ಸಿಕ್ಕಿಲ್ಲ.
ಅರ್ಜುನ್ ರಾಮು ಹಿನ್ನೆಲೆಯಲ್ಲಿ ಬರುವ ಗೀತೆಗಳು ಸಂದರ್ಭಕ್ಕೆ ಸರಿಯಾಗಿ ಜೋಡಣೆ ಆಗಿವೆ. ಛಾಯಾಗ್ರಾಹಕ ಮನೋಹರ್ ಜೋಷಿ ಹೊರಾಂಗಣ ಹಾಗೂ ಒಳಾಂಗಣವನ್ನು ಚಂದವಾಗಿ ತೆರೆಮೇಲೆ ತಂದಿದ್ದಾರೆ.
ಕುತೂಹಲವನ್ನು ಬಯಸುವವರು, ಥ್ರಿಲ್ಲರ್ ಕಥಾ ವಸ್ತು ಇಷ್ಟಪಡುವವರು ಖುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ನಿರ್ದೇಶಕ ಜಾಣ್ಮೆ ತೋರಿದ್ದಾರೆ. ಪ್ರೇಕ್ಷಕರ ಅನಿಸಿಕೆ ಬದಲಾಗುತ್ತ ಹೋಗುವುದೇ ಈ ಚಿತ್ರದ ಹೈಲೈಟ್!