ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಸಿನಿಮಾ ‘ಗರ‘ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದೊಡ್ಡ ಕನಸನ್ನು ಕಟ್ಟಿಕೊಂಡು ನಿರ್ದೇಶಕ ಮುರಳಿಕೃಷ್ಣ ಸಿನಿಮಾವನ್ನು ಪ್ರೇಕ್ಷಕನ ಮುಂದೆ ಇಟ್ಟಿದ್ದಾರೆ. ಅಂದಿನ ಸುನಿಲ್ ಕುಮಾರ್ ದೇಸಾಯಿ ಅವರ ನೆರಳು ಮುರಳಿಕೃಷ್ಣ ಅವರಲ್ಲೂ ಕಾಣಸಿಗುತ್ತದೆ.
‘ಗರ’ ಚಿತ್ರದ ಕಥೆಯನ್ನು ನಿರೂಪಣೆ ಮಾಡುತ್ತಾ ಹೋದರೆ ಕೆಲವೊಮ್ಮೆ ಗೊಂದಲಮಯ ಸ್ಥಿತಿ ಉಂಟಾಗುತ್ತದೆ. ಚಿತ್ರಕಥೆ, ಅಭಿನಯ, ಉತ್ತಮ ಸಂಗೀತ ಮತ್ತು ಛಾಯಾಗ್ರಹಣ ಮೇಲುಗೈ ಸಾಧಿಸಿದೆ. ನಿಮಗೆಲ್ಲಾ ಮಹಾಭಾರತದ ಪ್ರಸಂಗ ಗೊತ್ತೇ ಇದೆ. ಜೂಜಿನಲ್ಲಿ ‘ಗರ‘ (ಕವಡೆ) ಹಾಕಲಾಗುತ್ತದೆ. ಈ ಸಿನಿಮಾದಲ್ಲಿ ನಾಯಕ ನಿಶಾಂತ್ ಅಲಿಯಾಸ್ ಗಂಗಸ್ವಾಮಿ (ರೆಹಮಾನ್ ಹಾಸನ್) ಮೋಸದ ‘ಗರ‘ ಹಾಕುವ ಮಾಯಾವಿ. ರೆಹಮಾನ್ ಈ ಸಿನಿಮಾದಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೋತಿಷಿ, ಲವರ್ ಬಾಯ್ ಹಾಗೂ ಗ್ಯಾಂಗ್ಸ್ಟರ್ ಮೂರೂ ಶೇಡ್ಗಳಲ್ಲಿ ನಟಿಸಿರುವ ಆತ ಎಲ್ಲದಕ್ಕೂ ‘ಗರ‘ ಹಾಕುವ ವ್ಯಕ್ತಿ. ಇವನು ಡಿಜಿಟಲ್ ಗೌಡ (ಆದಿತ್ಯ ಆರ್ಯನ್) ಕೋಟೆಯಲ್ಲಿ ಬಂಧಿಯಾಗಿರುವವನು. ನಿಶಾಂತ್ ಪ್ರೇಯಸಿ ಆಕಸ್ಮಿಕಗೆ (ಆವಂತಿಕ ಮೋಹನ್) ಮೋಸದ ‘ಗರ‘ ಇಷ್ಟವಿರುವುದಿಲ್ಲ. ಅಪ್ರತಿಮ ಮೋಸಗಾರ ನಿಶಾಂತ್ ಹಾಕುವ ಗರದಲ್ಲಿ ಇವಳು ಕೂಡಾ ಬಂಧಿಯೇ.
ಆದರೆ ಆಕಸ್ಮಿಕ ನೆಮ್ಮದಿಯ ಜೀವನಕ್ಕೆ ಹಾತೊರೆಯುತ್ತಿರುತ್ತಾಳೆ. ಡಿಜಿಟಲ್ ಗೌಡನಿಂದ ತಪ್ಪಿಸಿಕೊಳ್ಳಲು ನಿಶಾಂತ್ ತನಗೆ ತಾನೇ ‘ಗರ‘ ಹಾಕಿಕೊಂಡು ಅದರಲ್ಲಿ ಸೋಲುತ್ತಾನೆ. ಇದರಿಂದ ನಿಶಾಂತ್ ಪ್ರೇಯಸಿಯನ್ನು ಡಿಜಿಟಲ್ ಗೌಡ ತನ್ನ ಬಂಧಿಯಲ್ಲಿರಿಸಿಕೊಳ್ಳುತ್ತಾನೆ. ಆಕೆಯನ್ನು ಬಿಡಿಸಿ ಕರೆತರಲು ನಿಶಾಂತ್ಗೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆಯಿರುತ್ತದೆ. ಇಲ್ಲಿಂದ ಚಿತ್ರ ನಾನಾ ತಿರುವು ಪಡೆದುಕೊಳ್ಳುತ್ತದೆ. ನಿಶಾಂತ್ಗೆ ಹಣ ದೊರೆಯುವುದಾ..? ತನ್ನ ಪ್ರೇಯಸಿಯನ್ನು ಆತ ಬಿಡಿಸಿ ತರುತ್ತಾನಾ..ಇಲ್ಲವಾ ಎಂಬುದು ಸಸ್ಪೆನ್ಸ್.
ರೆಹಮಾನ್ ಹಾಸನ್, ಪ್ರದೀಪ್ ಆರ್ಯನ್, ಆವಂತಿಕ ಕಷ್ಟ ಪಟ್ಟು ಪಾತ್ರ ನಿರ್ವಹಿಸಿದ್ದಾರೆ. ಈ ಮೂರೂ ಪಾತ್ರಗಳ ಮೇಲೆ ಚಿತ್ರ ಕೇಂದ್ರೀಕೃತ ಆಗಿದೆ. ಜಾನಿ ಲಿವರ್ ಹಾಗೂ ಸಾಧು ಕೋಕಿಲ ಪಾತ್ರ ಅಷ್ಟು ಸಮಂಜಸ ಅನ್ನಿಸುವುದಿಲ್ಲ. ಹಿರಿಯರ ಪೈಕಿ ರಮೇಶ್ ಭಟ್, ತಬಲಾ ನಾಣಿ, ಪದ್ಮಜ ರಾವ್, ಮಿಮಿಕ್ರಿ ದಯಾನಂದ, ಶ್ರೀಕಾಂತ್ ಹೆಬ್ಳೀಕರ್, ಪ್ರಶಾಂತ್ ಸಿದ್ದಿ ಪಾತ್ರ ಪೋಷಣೆ ಚೆನ್ನಾಗಿದೆ.
ಹೆಚ್.ಸಿ. ವೇಣು ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಕೂಡಾ ಚಂದವಾಗಿ ಮೂಡಿಬಂದಿದೆ. ಸಂಗೀತ ನಿರ್ದೇಶಕ ಸಾಗರ್ ಗುರುರಾಜ್ ಹಾಡುಗಳು ಚೆನ್ನಾಗಿವೆ. ಮಂಜುಳ ಗುರುರಾಜ್ ಅವರ ಹಾಡು, ಚಿತ್ರದ ಟೈಟಲ್ ಸಾಂಗ್ ಮತ್ತೊಂದು ಡ್ಯೂಯಟ್ ಹಾಡು ಸೊಗಸಾಗಿದೆ. ಚಿತ್ರದ ಅವಧಿ ಹೆಚ್ಚಾಗಿದ್ದು ನಿರ್ದೇಶಕ ಮುರಳಿಕೃಷ್ಣ ಅವಧಿಯನ್ನು ಕಡಿಮೆ ಮಾಡಿದರೆ ಚಿತ್ರವನ್ನು ನೋಡಲು ಹೆಚ್ಚಿನ ವೀಕ್ಷಕರು ಬರಬಹುದು.