ಕಾಮಿಡಿ ಕಿಂಗ್ ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹಾಸ್ಯ ಲೇಪನ ಹೆಚ್ಚಾಗಿದ್ದು, ಹಾಸ್ಯ ರಸಾಯನದಲ್ಲಿ ಮಿಂದು ಎದ್ದಿರುವ ಸಿನಿಮಾ ಇದು. ನಿರ್ದೇಶಕ ಯೋಗಾನಂದ್ ಮುದ್ದನ್ ಮಾನವೀಯತೆ, ಪ್ರೀತಿ, ನಿಷ್ಠೆಯನ್ನು ಮರೆತು ಅಮೆರಿಕ ಸಂಸ್ಕೃತಿಯಲ್ಲಿ ಕಳೆದುಹೋಗುತ್ತಿರುವ ಭಾರತೀಯರ ಜೀವನವನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಿದ್ದಾರೆ.
ಮೊದಲಾರ್ಧ ಮನರಂಜನೆ ಜೊತೆ ಹಾಸ್ಯ, ದ್ವಿತೀಯಾರ್ಧ ಹಾಸ್ಯದ ಜೊತೆಗೆ ಮಾನವೀಯತೆಯ ಮೆರವಣಿಗೆ ಮಾಡಿಸುತ್ತದೆ ಈ ‘ಅಧ್ಯಕ್ಷ ಇನ್ ಅಮೆರಿಕ’. ನಾಯಕ ಎ.ಉಲ್ಲಾಸ್ (ಶರಣ್) ಹಾಗೂ ಒ.ಉಲ್ಲಾಸ್ (ತಾರಕ್ ಪೊನ್ನಪ್ಪ) ತಮ್ಮ ಊರಿನ ಪಂಚಾಯಿತಿ ಅಧ್ಯಕ್ಯ ಚುನಾವಣೆಗೆ ನಿಲ್ಲುತ್ತಾರೆ. ಆದರೆ, ಎ.ಉಲ್ಲಾಸ್ ಮಾಡುವ ತಂತ್ರಗಾರಿಕೆಗೆ ಮೂರನೇ ವ್ಯಕ್ತಿ ಅಧ್ಯಕ್ಷ ಆಗಿ ಗೆಲ್ಲುತ್ತಾರೆ. ಇದರಿಂದ ಅವರು 15 ಲಕ್ಷ ರೂಪಾಯಿ ಪಡೆಯುತ್ತಾರೆ. ಆಗಲೇ ಎ.ಉಲ್ಲಾಸ್ ಒಂದು ಆಕಸ್ಮಿಕ ಪೋನ್ಕಾಲ್ನಿಂದ ನಂದಿನಿಗೆ (ರಾಗಿಣಿ ದ್ವಿವೇದಿ) ಪರಿಚಯ ಆಗುತ್ತಾನೆ. ಆದರೆ ನಂದಿನಿ ಮಾತನಾಡಬೇಕಾಗಿದ್ದು ಒ.ಉಲ್ಲಾಸ್ ಬಳಿ. ನಂದಿನಿ ಅಮೆರಿಕದಿಂದ ಭಾರತಕ್ಕೆ ಬಂದಾಗ ಸುಳ್ಳು ಹೇಳಿ ಆಕೆಯನ್ನು ಎ.ಉಲ್ಲಾಸ್ ಮದುವೆಯಾಗುತ್ತಾನೆ. ಮದುವೆ ನಂತರ ಆಕೆಗೆ ನಿಜ ತಿಳಿಯುತ್ತದೆ. ಆಗ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತದೆ. ನಂದಿನಿ ಹೆಸರಲ್ಲಿ 100 ಕೋಟಿ ರೂಪಾಯಿ ಆಸ್ತಿ ಇದೆ ಎಂಬ ವಿಷಯ ಎ.ಉಲ್ಲಾಸ್ಗೆ ತಿಳಿಯುತ್ತದೆ. ನಂದಿನಿ ಪ್ರೀತಿಯನ್ನು ಉಲ್ಲಾಸ್ ಗೆಲ್ಲುತ್ತಾನಾ..? ಆತನನ್ನು ನಂದಿನಿ ಗಂಡ ಎಂದು ಒಪ್ಪಿಕೊಳ್ಳುತ್ತಾಳಾ ಎಂಬುದನ್ನು ನೀವು ಥಿಯೇಟರ್ನಲ್ಲಿಯೇ ನೋಡಬೇಕು.
ಶರಣ್, ತಾವು ನಿಜಕ್ಕೂ ಕಾಮಿಡಿ ಕಿಂಗ್ ಎಂಬುದನ್ನು ಚಿತ್ರದಲ್ಲಿ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಅವರ ಕಾಮಿಡಿ ಟೈಮಿಂಗ್, ಡೈಲಾಗ್, ಕಾಸ್ಟ್ಯೂಮ್, ಡ್ಯಾನ್ಸ್ ಎಲ್ಲವೂ ಚೆನ್ನಾಗಿದೆ. ಇನ್ನು ನಾಯಕಿ ರಾಗಿಣಿ ದ್ವಿವೇದಿ ಅವರ ಇತರ ಸಿನಿಮಾಗಳಿಗಿಂತ ಇದು ಬೆಸ್ಟ್ ಎನ್ನಬಹುದು. ಕೇವಲ ಮರ ಸುತ್ತುವ ನಾಯಕಿ ಆಗಿ, ಸಾಹಸ ದೃಶ್ಯಗಳಲ್ಲಿ ಮಿಂಚಿದ್ದ ನಾಯಕಿ ರಾಗಿಣಿ ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲಿ ಎಲ್ಲರ ಹೃದಯ ತಟ್ಟುತ್ತಾರೆ. ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಹಾಸ್ಯಕ್ಕೆ ಬರವಿಲ್ಲ. ಸಾಧು ಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ ಹಾಗೂ ರಾಗಿಣಿ ಅವರ ಕೆಲವು ಹಾಸ್ಯ ಸನ್ನಿವೇಶಗಳು ಸಿನಿಮಾದ ಬಹು ದೊಡ್ಡ ಟಾನಿಕ್.
ಅವಿನಾಶ್, ಪ್ರಕಾಶ್ ಬೆಳವಾಡಿ, ಚಿತ್ರಾ ಶೆಣೈ, ದಿಶಾ ಪಾಂಡೆ, ಮಕರಂದ್ ದೇಶ್ಪಾಂಡೆ ಅವರ ಪಾತ್ರಗಳು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ವಿ. ಹರಿಕೃಷ್ಣ ಅವರ ಮೂರು ಹಾಡುಗಳು ಮತ್ತೆ ಕೇಳಬೇಕು ಎನಿಸುತ್ತದೆ. ಮೂರು ಛಾಯಾಗ್ರಾಹಕರು ಸಿನಿಮಾವನ್ನು ಅಂದವಾಗಿ ತೋರಿಸಿದ್ದಾರೆ. ಸಂಕಲನದಲ್ಲಿ ಕೆಲವು ಸನ್ನಿವೇಶಗಳಿಗೆ ಕತ್ತರಿ ಹಾಕಬಹುದಿತ್ತು. ರಾಗಿಣಿ ಹಾಗೂ ಶರಣ್ ಇಬ್ಬರ ವಸ್ತ್ರ ವಿನ್ಯಾಸಕಾರರ ಕೆಲಸ ಮೆಚ್ಚಬಹುದು. ಎರಡು ಹಾಡುಗಳಲ್ಲಿ ನೃತ್ಯ ನಿರ್ದೇಶನ ಕೂಡಾ ಬೊಂಬಾಟಾಗಿದೆ. ‘ಅಧ್ಯಕ್ಷ ಇನ್ ಅಮೆರಿಕ’ ಮಲಯಾಳಂನ ‘ಟೂ ಕಂಟ್ರೀಸ್’ ಸ್ಫೂರ್ತಿಯಿಂದ ತಯಾರಾದ ಸಿನಿಮಾ ಆದರೂ ಒಮ್ಮೆ ಖಂಡಿತ ನೋಡಬಹುದು.