ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಪ್ರಾಪ್ ಗನ್‌ನಿಂದ ಹಾಲಿವುಡ್ನ ಖ್ಯಾತ ನಟ ಅಲೆಕ್ ಬಾಲ್ಡ್ವಿನ್ ಗುಂಡು ಹಾರಿಸಿದ್ದು, ಛಾಯಾಗ್ರಾಹಕಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ನಿರ್ದೇಶಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ 'ರಸ್ಟ್' ಎಂಬ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ಸಿನಿಮಾವನ್ನು ಜೋಯಲ್ ಸೌಜಾ ನಿರ್ದೇಶಿಸುತ್ತಿದ್ದು, ನಟ ಅಲೆಕ್ ಬಾಲ್ಡ್ವಿನ್ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ.
ಶೂಟಿಂಗ್ ವೇಳೆ ಬಳಸುವ ಪ್ರಾಪ್ ಗನ್‌ನಿಂದ ನಟ ಅಲೆಕ್ ಬಾಲ್ಡ್ವಿನ್ ಗುಂಡು ಹಾರಿಸಿದ್ದು, ಛಾಯಾಗ್ರಾಹಕಿ ಹಲಿನಾ ಹಚಿನ್ಸ್ (42) ಹಾಗೂ ನಿರ್ದೇಶಕ ಜೋಯಲ್ ಸೌಜಾ (48) ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹಲಿನಾ ಹಚಿನ್ಸ್ ಮೃತಪಟ್ಟಿದ್ದು, ಜೋಯಲ್ ಸೌಜಾಗೆ ಚಿಕಿತ್ಸೆ ಮುಂದುವರೆದಿದೆ.
ಆಕಸ್ಮಿಕವಾಗಿ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ತನಿಖೆ ಬಳಿಕ ಕಾರಣ ಬೆಳಕಿಗೆ ಬರಲಿದೆ. ಪ್ರಾಪ್ ಗನ್, ಇದು ಚಿತ್ರೀಕರಣಕ್ಕಾಗಿ ಬಳಸುವ ಆಟಿಕೆ ರೀತಿಯ ಗನ್ ಅಂದರೆ, ನೈಜವಲ್ಲದ ಬಂದೂಕಾಗಿದೆ. ಇದರಲ್ಲಿ ಬುಲೆಟ್ಗಳು ಹೇಗೆ ಬಂದವು? ಛಾಯಾಗ್ರಾಹಕಿ ಹಾಗೂ ನಿರ್ದೇಶಕ ಗುಂಡಿಗೆ ಹೇಗೆ ಗುರಿಯಾದರು ಎಂಬ ಪ್ರಶ್ನೆಗಳು ಎಲ್ಲರಲ್ಲಿ ಮೂಡಿವೆ.