ದೇಶದಲ್ಲಿ ಕೊರೊನಾ ಬಿಡಾರ ಹೂಡಿ ಒಂದು ವರ್ಷವೇ ಕಳೆದಿದೆ. ಈ ಹೆಮ್ಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಬೆಡ್ ಹಾಗೂ ಆಕ್ಸಿಜನ್ ಸಿಗದೆ ಜನರು ಜೀವ ಬಿಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲ ಸಿನಿಮಾ ಸೆಲೆಬ್ರೆಟಿಗಳು ಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಇದೇ ರೀತಿ ಕನ್ನಡದ ನಟನೊಬ್ಬ ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಜನರ ಸೇವೆಗೆ ಮುಂದಾಗಿದ್ದಾರೆ.
ಹೌದು, ನಟ ಅರ್ಜುನ್ ಗೌಡ ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಆ್ಯಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಜನರಿಗೆ ಇವರು ಸಹಾಯ ಮಾಡಲು ಮುಂದಾಗಿದ್ದಾರೆ. ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವುದರೊಂದಿಗೆ ಅಂತ್ಯ ಸಂಸ್ಕಾರಕ್ಕೆ ಮೃತದೇಹಗಳನ್ನು ಸಾಗಿಸಲು ಸಹಾಯ ಮಾಡಿ ಜನಮನ ಸೆಳೆದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ದರ್ಶನ್, ಶಿವರಾಜ್ ಕುಮಾರ್ ನಟನೆಯ ರುಸ್ತುಂ, ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಹೀಗೆ ಹಲವಾರು ನಟರ ಚಿತ್ರಗಳಲ್ಲಿ ಅಭಿನಯಿಸಿರುವ ಅರ್ಜುನ್ ಗೌಡ ಇದೀಗ ಕೊರೊನಾ ಸಂಕಷ್ಟ ಕಾಲದಲ್ಲಿ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸಿನಿಮಾ ಜೊತೆ ಜೊತೆಗೆ ಫಿಟ್ನೆಸ್ ಬಗ್ಗೆ ಹೆಚ್ಚು ಒಲವು ಹೊಂದಿರುವ ಅರ್ಜುನ್ ಗೌಡ, ಜನರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರದಿಂದ ನಟ ಆ್ಯಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಅವರ ಫ್ಯಾಮಿಲಿಯವರಿಗೆ ತಿಳಿದೇ ಇರಲಿಲ್ಲವಂತೆ. ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ರೂ ಕೂಡ ನಂತರ ಮಗನ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಅರ್ಜುನ್ ಗೌಡ ಹೇಳುವ ಹಾಗೆ, ದಿನಕ್ಕೆ ನಾಲ್ಕರಿಂದ ಐದಾರು ಕೊರೊನಾ ಶವಗಳನ್ನ ಸ್ಮಶಾನಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರಂತೆ. ಈ ಕೆಲಸವನ್ನು ಇನ್ನೂ ಕೆಲವು ತಿಂಗಳ ಕಾಲ ಮುಂದುವರೆಸಲು ನಿರ್ಧರಿಸಿದ್ದಾರಂತೆ. ಸದ್ಯ ಅರ್ಜುನ್ ಗೌಡ ಮಾಡುತ್ತಿರುವ ಕೆಲಸಕ್ಕೆ ಜನ ಸಾಮಾನ್ಯರಲ್ಲದೆ ಸ್ಯಾಂಡಲ್ವುಡ್ ನಟ-ನಟಿಯರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.