ಹಿರಿಯ ನಟ ದತ್ತಣ್ಣ ಇದ್ದ ಕಡೆ ಒಳ್ಳೆಯ ಮಾತು ಹಾಗೂ ನೇರ ನುಡಿಗೆ ಕೊರತೆ ಇಲ್ಲ. ಎರಡು ಬಾರಿ ಪೋಷಕ ಪಾತ್ರಕ್ಕೆದತ್ತಣ್ಣರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ . ’ಮನಸ್ಸಿನಾಟ’ ಅವರು ಅಭಿನಯಿಸಿರುವ ಇತ್ತೀಚಿನ ಸಿನಿಮಾ. ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕು.
ದತ್ತಣ್ಣ ಅವರು ಯಾವುದಾದರೂ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎಂದರೆ ಸಂತೋಷದ ವಿಷಯವೇ ಸರಿ. ಆದರೆ ಅವರ ಪ್ರಶ್ನೆಗಳಿಗೆ ಉತ್ತರಿಸದಿದ್ದಲ್ಲಿ ಕ್ಯಾಮೆರಾ ಮುಂದೆ ಪಾತ್ರ ಬರುವುದಿಲ್ಲ. ‘ಕೆಂಪಿರ್ವೆ’ ಸಿನಿಮಾ ಮಾಡುವಾಗ ದತ್ತಣ್ಣ ಅವರಲ್ಲಿದ್ದ ಆಳವಾದ ಯೋಚನಾ ಲಹರಿ, ಎಲ್ಲವೂ ಪರ್ಫೆಕ್ಟ್ ಆಗಿ ನಡೆಯಬೇಕು ಎಂಬ ಧಾವಂತ ಎಂಬ ಮನೋಭಾವ ಅವರಲ್ಲಿ ಇರುವುದನ್ನು ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ ಎಂದು ನಿರ್ಮಾಪಕ ಉಮೇಶ್ ಬಣಕರ್ ಹೇಳಿದರು.
ಉಮೇಶ್ ಮಾತಿಗೆ ಪ್ರತಿಕ್ರಿಯಿಸಿದ ದತ್ತಣ್ಣ, ‘ನಾನು ಹೆಚ್ಚು ದಿನಗಳು ಬದುಕಲ್ಲಪ್ಪ’. ನನಗೆ ಸಿಗುವ ಅವಕಾಶಗಳನ್ನು ನಿಮ್ಮ ಮಾತುಗಳಿಂದ ಏಕೆ ಕಿತ್ತುಕೊಳ್ತೀರ...? ನನ್ನ ಊಟ ಕೊಲ್ಲಬೇಡಿ ಎಂದು ಖಡಕ್ ಆಗಿ ಹೇಳಿಬಿಟ್ಟರು. ಉಮೇಶ್ ಬಣಕರ್, ದತ್ತಣ್ಣ ಅವರ ಕ್ವಾಲಿಟಿಯನ್ನು ಕಮೆಂಟ್ ಮಾಡಲು ಹೋದದ್ದು ಈ ರೀತಿಯ ಪ್ರತಿಕ್ರಿಯೆಗೆ ದಾರಿ ಮಾಡಿಕೊಟ್ಟಿತು. ನಂತರ ಸಮಾಧಾನದಿಂದ ಮಾತನಾಡಿದ ದತ್ತಣ್ಣ, ’ಮನಸ್ಸಿನಾಟ’ ಚಿತ್ರದ ಬಗ್ಗೆ ಹೇಳಿದರು. ನನಗೆ ಈ ಬ್ಲೂ ವೇಲ್ ಆಟ ಏನು ಅಂತ ಗೊತ್ತಿರಲಿಲ್ಲ. ಈ ಚಿತ್ರದಿಂದ ಅದನ್ನು ತಿಳಿಯುವಂತೆ ಆಯಿತು. ಈ ಸಿನಿಮಾವನ್ನು ಕೇವಲ ಮಕ್ಕಳಷ್ಟೇ ಅಲ್ಲ ಅವರ ತಂದೆ-ತಾಯಂದಿರು ಕೂಡಾ ಬಂದು ನೋಡಬೇಕು ಎಂದು ವಿನಂತಿಸಿಕೊಂಡರು.