'ಬಂಗಾರದ ಮನುಷ್ಯ' ಡಾ. ರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ದೊಡ್ಡ ಮೈಲಿಗಲ್ಲಾದಂತ ಸಿನಿಮಾ. ಈ ಬಂಗಾರದಂತ ಚಿತ್ರಕ್ಕೆ 48 ರ ಸಂಭ್ರಮ. ಇಂದಿಗೂ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿರುವ ಈ ಸಿನಿಮಾ ಆರಂಭವಾಗಿದ್ದು ಹೇಗೆ..? ಎಷ್ಟು ಬಜೆಟ್ನಲ್ಲಿ ಸಿನಿಮಾ ತಯಾರಾಯ್ತು..? ಡಾ. ರಾಜ್ಕುಮಾರ್ ಅವರನ್ನೇ ನಾಯಕರನ್ನಾಗಿ ಏಕೆ ಆಯ್ಕೆ ಮಾಡಲಾಯ್ತು ಎಂಬುದರ ಬಗ್ಗೆ ಇಲ್ಲಿದೆ ವಿವರ.
ಈಗಿನ ಖ್ಯಾತ ನಿರ್ದೇಶಕ ಬಿ. ನಾಗಣ್ಣ ಅವರ ತಂದೆ ಲಕ್ಷ್ಮಣ್ ಹಾಗೂ ಗೋಪಾಲ್ ಇಬ್ಬರೂ ಜೊತೆ ಸೇರಿ ನಿರ್ಮಾಣ ಮಾಡಿದ ಸಿನಿಮಾ 'ಬಂಗಾರದ ಮನುಷ್ಯ'. ಟಿ.ಕೆ. ರಾಮರಾವ್ ಅವರ ಕಾದಂಬರಿ ಆಧರಿಸಿದ ಸಿನಿಮಾ ಇದು. ನಿರ್ದೇಶಕ ಬಿ. ನಾಗಣ್ಣ ಹೇಳುವ ಪ್ರಕಾರ 'ಬಂಗಾರದ ಮನುಷ್ಯ' ಸಿನಿಮಾ ಮಾಡಲು ಹೇಳಿದ್ದು ನಟ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಅಂದು ಹುಣಸೂರು ಕೃಷ್ಣಮೂರ್ತಿ ಹೇಳಿದ ಹಾಗೆ ನಾಗಣ್ಣ ತಂದೆ ಈ ಸಿನಿಮಾ ಮಾಡಲು ಮನಸ್ಸು ಮಾಡಿದ್ರಂತೆ.
ಡಾ. ರಾಜ್ಕುಮಾರ್ ನಟನೆಯ 143ನೇ ಸಿನಿಮಾ 'ಬಂಗಾರದ ಮನುಷ್ಯ'. ನಿರ್ದೇಶಕ ಸಿದ್ದಲಿಂಗಯ್ಯ ಹಾಗೂ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿ ಬಂದ 6 ನೇ ಸಿನಿಮಾ. ಒಟ್ಟು 7 ಸಿನಿಮಾಗಳಲ್ಲಿ ಇಬ್ಬರೂ ಜೊತೆ ಸೇರಿ ಕೆಲಸ ಮಾಡಿದರು. ನಿರ್ದೇಶನದ ಜೊತೆಗೆ ಸಿದ್ದಲಿಂಗಯ್ಯ ಚಿತ್ರಕಥೆ ಕೂಡಾ ಬರೆದದ್ದು ಚಿತ್ರದ ಯಶಸ್ಸಿನ ಮಂತ್ರ ಎನ್ನಬಹುದು. ನಿರ್ದೇಶಕ ಸಿದ್ದಲಿಂಗಯ್ಯ, ನಿರ್ಮಾಪಕರಾದ ಲಕ್ಷ್ಮಣ್ ಮತ್ತು ಗೋಪಾಲ್ , ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಛಾಯಾಗ್ರಾಹಕ ಡಿ.ವಿ. ರಾಜಾರಾಂ ಸೇರಿದಂತೆ ಇಡೀ ಚಿತ್ರತಂಡ ಸೇರಿ ಈ ಚಿತ್ರಕ್ಕೆ ಹೊಸ ಹೊಸ ಲೊಕೇಶನ್ ಹುಡುಕಾಡಿದೆ.
ಬೆಂಗಳೂರಿನ ಭೂಮಿಕಾ ಥಿಯೇಟರ್ನಲ್ಲಿ, 'ಬಂಗಾರದ ಮನುಷ್ಯ' ಸಿನಿಮಾ ಸತತ 2 ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಕಥೆ ಮಾಡಿದಾಗ ಡಾ. ರಾಜ್ ಕುಮಾರ್ ಈ ಸಿನಿಮಾದಲ್ಲಿ ಅಭಿನಯಿಸಲು ಕಾರಣ ನಿರ್ಮಾಪಕ ಲಕ್ಷ್ಮಣ್ ಜೊತೆಗಿದ್ದ ಸ್ನೇಹ. ಇನ್ನು ನಗರದಿಂದ ಹಳ್ಳಿಗೆ ಬರುವ ಡಾ. ರಾಜ್ ಕುಮಾರ್ ಅಭಿನಯ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಈ ಸಿನಿಮಾ 2 ವರ್ಷಗಳು ಪ್ರದರ್ಶನ ಕಾಣಲು ಕಾರಣವಾಗಿದ್ದು ಕಥೆ ಹಾಗೂ ಚಿತ್ರದ ಹಾಡುಗಳು. ಚಿತ್ರದ ಹಾಡುಗಳಿಗೆ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ಬರೆದಿದ್ದರೆ, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ರಾಗ ಸಂಯೋಜನೆ ಮಾಡಿದರು. ಒಂದೊಂದು ಹಾಡುಗಳು 6 ನಿಮಿಷ ಇದ್ದರೂ ಕೂಡಾ ಪ್ರತಿ ಹಾಡುಗಳು ಸೂಪರ್ ಹಿಟ್ ಆದವು.
1972 ರ ಸಮಯದಲ್ಲಿ ಸುಮಾರು 12 ಲಕ್ಷ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ ಇದು. ಅಂದಿನ ದಿನಗಳಲ್ಲಿ ಅತಿ ಹೆಚ್ಚು ಬಜೆಟ್ನಿಂದ ತಯಾರಾದ ಕನ್ನಡ ಸಿನಿಮಾ 'ಬಂಗಾರದ ಮನುಷ್ಯ'. ಈ ಸಿನಿಮಾ ತೆರೆ ಕಂಡಾಗ, ಅದೆಷ್ಟೋ ಜನರು ಸಿಟಿ ತೊರೆದು ತಮ್ಮ ಹುಟ್ಟೂರುಗಳಿಗೆ ಬಂದು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸಿರುವ ಎಷ್ಟೊ ಉದಾಹರಣೆಗಳಿವೆ. ತುಮಕೂರಿನ ತುರುವೇಕೆರೆಯ ಜಯಣ್ಣ ಎಂಬುವವರು ಸಿನಿಮಾ ನೋಡಿ, ಆ ಚಿತ್ರದಲ್ಲಿ ಡಾ.ರಾಜ್ಕುಮಾರ್ ವಾಸಿಸುವ ರೀತಿಯ ಮನೆಯನ್ನು ಕಟ್ಟಿಸಿಕೊಂಡರಂತೆ.
ಇನ್ನು 1972ರಲ್ಲಿ ಇಂದಿನ ಭೂಮಿಕಾ ಚಿತ್ರಮಂದಿರ ಅಂದರೆ ಅಂದಿನ ಸ್ಟೇಟ್ ಚಿತ್ರಮಂದಿರದಲ್ಲಿ 'ಬಂಗಾರದ ಮನುಷ್ಯ' ಚಿತ್ರ, ಪ್ರದರ್ಶನ ಕಾಣುತ್ತಿತ್ತು. ಅದರೆ ಸಿನಿಮಾ ಮಾಲೀಕರು ಹಿಂದಿ ಸಿನಿಮಾವೊಂದನ್ನು ರಿಲೀಸ್ ಮಾಡಲು 'ಬಂಗಾರದ ಮನುಷ್ಯ' ಚಿತ್ರವನ್ನು ತೆಗೆದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದು ಇಡೀ ಕೆ.ಜಿ ರಸ್ತೆಯನ್ನು ಬಂದ್ ಮಾಡಿ ಹೋರಾಟ ಮಾಡಿದ್ದರುಅಷ್ಟರ ಮಟ್ಟಿಗೆ 'ಬಂಗಾರದ ಮನುಷ್ಯ' ಚಿತ್ರ ಜನರ ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು ಎಂದು ನಾಗಣ್ಣ ಆ ಘಟನೆಯನ್ನು ನೆನಪಿಸಿಕೊಂಡರು.
ಇಷ್ಟು ಮಾತ್ರವಲ್ಲದೆ, 1971 -72 ನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಒಟ್ಟು 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ 'ಬಂಗಾರದ ಮನುಷ್ಯ' ಚಿತ್ರಕ್ಕೆ ದೊರೆತಿದೆ. ಒಟ್ಟಾರೆ ಡಾ. ರಾಜ್ ಅಭಿನಯದ ಈ ಸಿನಿಮಾ ಎಂದೆಂದಿಗೂ ಬಂಗಾರದ ಚಿತ್ರ ಎನ್ನುವುದಕ್ಕೆ ಈ ರೋಚಕ ವಿಷಯಗಳೇ ಸಾಕ್ಷಿ.