ಸೃಜನ್ ಲೋಕೇಶ್ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸಿನಿಮಾ ನಿರ್ಮಾಣದ ಹಿಂದೆ ಅವರಿಗೆ ಒಂದು ಆಸೆ ಇದೆಯಂತೆ. ತಾತನ ಹೆಸರಿನ ರಾಜ್ಯ ಪ್ರಶಸ್ತಿ ಪಡೆಯಬೇಕು ಎಂಬುದು ಸೃಜನ್ ಕೋರಿಕೆ ಎನ್ನಲಾಗಿದೆ.
ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರರಂಗದ ಮೊದಲ ನಾಯಕ. 1934 ಮಾರ್ಚ್ 3 ರಂದು ಬಿಡುಗಡೆಯಾದ ಸತಿ ಸುಲೋಚನ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಪ್ರಶಸ್ತಿ ಆರಂಭವಾದಾಗ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ಕೊಡಬೇಕು ಎಂದು ತೀರ್ಮಾನ ಆಗಿದೆ. ಸುಬ್ಬಯ್ಯ ನಾಯ್ಡು ಪುತ್ರ ಲೋಕೇಶ್ ಆ ಪ್ರಶಸ್ತಿಯನ್ನು 40 ವರ್ಷಗಳ ವೃತ್ತಿ ಜೀವನದಲ್ಲಿ ಪಡೆದುಕೊಂಡರು. ಇದೀಗ ಮೊಮ್ಮಗ ಸೃಜನ್ ಲೋಕೇಶ್ ಕೂಡಾ ಈ ಪ್ರಶಸ್ತಿ ಪಡೆಯಬೇಕೆಂಬ ಆಸೆಯಿಂದ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ‘ಟಾಕಿಂಗ್ ಸ್ಟಾರ್‘ ಎಂದೇ ಹೆಸರಾದ ಸೃಜನ್ ಲೋಕೇಶ್ ‘ಮಜಾ ಟಾಕೀಸ್’ ನಿಂದ ಫೇಮಸ್. ಸುಮಾರು 500 ಕಂತುಗಳ ಕಾರ್ಯಕ್ರಮ ನಡೆಸಿಕೊಟ್ಟಿರುವ ಸೃಜನ್ ತಮ್ಮದೇ ನಿರ್ಮಾಣ ಸಂಸ್ಥೆ ‘ಲೋಕೇಶ್ ಪ್ರೊಡಕ್ಷನ್’ ಬ್ಯಾನರ್ ಅಡಿ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದೂ ಕೂಡಾ ಲೋಕೇಶ್ ಅವರ ಸಿನಿಮಾದ ಸಾಲುಗಳು.
ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ನಾಯಕಿ ಆಗಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಸೃಜನ್ ತಾಯಿ ಪಾತ್ರವನ್ನು ತಾರಾ ಅನುರಾಧ ನಿರ್ವಹಿಸಿದ್ದಾರೆ. ಸೃಜನ್ ಪುತ್ರ ಸುಕೃತ್ ಕೂಡಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದಾನೆ. ಈ ವಾರ, ಅಂದರೆ ಅಕ್ಟೋಬರ್ 11 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಸೃಜನ್ ಅವರ ಧೀರ್ಘಕಾಲದ ಗೆಳೆಯ ತೇಜಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ತಬಲಾ ನಾಣಿ, ಗಿರಿ, ಸೇರಿದಂತೆ ಇನ್ನಿತರ ಹಾಸ್ಯ ಕಲಾವಿದರು ಸೃಜನ್ ಜೊತೆ ಹಾಸ್ಯದ ಹೊನಲು ಹರಿಸಲಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ, ಹೆಚ್.ಸಿ. ವೇಣು ಛಾಯಾಗ್ರಹಣ ಇದೆ.