ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿಹೊಸ ಪ್ರತಿಭೆಗಳ ಆರ್ಭಟವೇ ಜೋರಾಗಿದೆ. ಒಂದಕ್ಕಿಂದ ಒಂದು ವಿಭಿನ್ನ ಚಿತ್ರಗಳ ರಸದೌತಣವನ್ನು ಕನ್ನಡ ಸಿನಿ ರಸಿಕರಿಗೆ ಸ್ಯಾಂಡಲ್ವುಡ್ ಉಣಬಡಿಸುತ್ತಿದೆ.

ಈ ಸಾಲಿಗೆ ಸೇರುವಂತ ಮತ್ತೊಂದು ಚಿತ್ರ 'ವೀಕ್ ಎಂಡ್'. ಈ ಸಿನಿಮಾ ಹೆಚ್ಚಿನ ಪ್ರಚಾರವಿಲ್ಲದೆ ಸಿದ್ಧವಾಗಿದ್ದು, ಇದೀಗ ಸೆನ್ಸಾರ್ ಬೋರ್ಡಿನಿಂದ ಯಾವುದೇ ಕಟ್ ಅಥವಾ ಮ್ಯೂಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ವರ್ಕ್ ಹಾರ್ಡ್ ಪಾರ್ಟಿ ಹಾರ್ಡ್' ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ತಯಾರಾಗಿರುವ ಸಿನಿಮಾ ಇದು. ಈ ವೀಕೆಂಡ್ ಬರೀ ಮೋಜು-ಮಸ್ತಿಗಷ್ಟೇ ಅಲ್ಲ, ಬದುಕನ್ನೇ ಬದಲಿಸಬಲ್ಲಂತ ಘಟನೆಗಳಿಗೂ ಸಾಕ್ಷಿಯಾದಂತ ಅದೆಷ್ಟೋ ಉದಾಹರಣೆಗಳು ಕಣ್ಣಮುಂದಿದೆ. ಇಂತಹ ವಿಭಿನ್ನ ಕಥಾ ಹಂದರ ಇಟ್ಟುಕೊಂಡು ಶೃಂಗೇರಿ ಸುರೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಮೂಡಿ ಬಂದಿರೋ ಚಿತ್ರವನ್ನು ಮಂಜುನಾಥ್ ಡಿ. ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಅನಂತ್ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಯುವ ಪ್ರತಿಭೆ ಶ್ರೀಲಂಕಾ ಮೂಲದ ಮನೋಜ್ ಎಸ್. ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ.