ಮುಂಬೈ (ಮಹಾರಾಷ್ಟ್ರ) : ಬಹುಭಾಷಾ ನಟಿ ಜ್ಯೋತಿಕಾ ತಮ್ಮ 50ನೇ ಸಿನಿಮಾ ಉದನ್‌ಪಿರಪ್ಪೆಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿದ್ದಾರೆ. ಅವರು, ತಮ್ಮ ವೃತ್ತಿ ಜೀವನದಲ್ಲಿ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಈ ಸಿನಿಮಾ ಒಡಹುಟ್ಟಿದವರ ಕಥೆಯನ್ನು ವಿವರಿಸಲಿದ್ದು, ಅಣ್ಣನಾಗಿ ನಟ ಶಶಿಕುಮಾರ್ ಮತ್ತು ತಂಗಿಯಾಗಿ ಮಾತಂಗಿ(ಜ್ಯೋತಿಕಾ) ನಟಿಸಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿರುವ ಜ್ಯೋತಿಕಾ, ನಾನು ಹಿಂದೆಂದೂ ಮಾಡದಿರುವಂಥ ಪಾತ್ರ ಮಾಡಿದ್ದೇನೆ. ವಿಭಿನ್ನ ವಯೋಮಾನದ ಪಾತ್ರ ಇದಾಗಿದೆ. ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ ಎಂದಿದ್ದಾರೆ. ನಾನು ಮಹಿಳೆಯ ಅತ್ಯಂತ ದೊಡ್ಡ ಸಾಮರ್ಥ್ಯ ‘ಮೌನ’ವನ್ನು ಈ ಸಿನಿಮಾದಲ್ಲಿ ನಿರ್ವಹಿಸಲು ಸಾಧ್ಯವಾಗಿದೆ.
ಯಾಕೆಂದರೆ, ಸುಮಾರು ಶೇ.90ರಷ್ಟು ಮಹಿಳೆಯರು ಮೌನದಲ್ಲಿ ಬದುಕುತ್ತಿದ್ದಾರೆ. ಆದರೆ, ಅವರು ಬಲಿಷ್ಟರು. ನಾನು ನನ್ನ ವೃತ್ತಿ ಜೀವನದಲ್ಲಿ ಅಭಿನಯಿಸಿದ ಅತ್ಯಂತ ಸುಂದರ ಪಾತ್ರವಿದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇನ್ನು ಮುಂದೆಯೂ ಸ್ತ್ರೀ ಆಧಾರಿತ ಸಿನಿಮಾ ಮಾಡುವುದಾಗಿ ಅವರು ಹೇಳಿದ್ದಾರೆ.
ಉದನ್ಪಿರಪ್ಪೆ ಜ್ಯೋತಿಕಾ ಪಾಲಿಗೆ ತುಂಬಾ ವಿಶೇಷ. ಯಾಕೆಂದರೆ, ಇದು ಅವರ 50ನೇ ಚಿತ್ರವಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಅಕ್ಟೋಬರ್ 14ರಂದು ರಿಲೀಸ್ ಆಗಿದೆ. ತೆಲುಗಿನಲ್ಲಿ ‘ರಕ್ತ ಸಂಬಂಧಂ‘ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಜ್ಯೋತಿಕಾ ಮತ್ತು ಅವರ ಪತಿ ಸೂರ್ಯ ನಿರ್ಮಿಸಿದ್ದಾರೆ. ರಾಜಶೇಖರ ಕರ್ಪೂರ ಸುಂದರ ಪಾಂಡಿಯನ್ ಈ ಸಿನಿಮಾದ ಸಹ ನಿರ್ಮಾಪಕರು. ಸಿನಿಮಾಕ್ಕೆ ವೆಲ್ರಾಜ್ ಛಾಯಾಗ್ರಹಣ ಮತ್ತು ಆ್ಯಂಟೋನಿ ಎಲ್ ರೂಬೆಲ್ ಸಂಕಲನವಿದೆ. ಡಿ. ಇಮಾಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಡ್ರೀಮ್ ಗರ್ಲ್ಗೆ 73ನೇ ಜನ್ಮದಿನದ ಸಂಭ್ರಮ..
ಉದನ್ಪಿರಪ್ಪೆ, ಸೂರ್ಯಾ ಅವರ 2ಡಿ ಎಂಟರ್‌ಟೈನ್‍ಮೆಂಟ್, ಅಮೆಜಾನ್ ಪ್ರೈಮ್ ವಿಡಿಯೋ ಜೊತೆ ಮಾಡಿಕೊಂಡಿರುವ ನಾಲ್ಕು ಸಿನಿಮಾಗಳ ಒಪ್ಪಂದದಲ್ಲಿ ಇದು ಎರಡನೆಯದ್ದು. ಅರಿಸಿಲ್ ಮೂರ್ತಿ ನಿರ್ದೇಶನದ, ರಾಜಕೀಯ ವಿಡಂಬನೆಯುಳ್ಳ ರಾಮನ್ ಅಂಡಾಲುಮ್ ರಾವಣನ್ ಅಂಡಾಲುಮ್ ಮೊದಲನೇ ಚಿತ್ರ. ಈರಾ ಶರವಣನ್ ಬರೆದು, ನಿರ್ದೇಶಿಸಿರುವ ಹೃದಯ ಸ್ಪರ್ಶಿ ಕೌಟುಂಬಿಕ ಕಥಾ ಹಂದರ ಹೊಂದಿರುವ ಉದನ್ಪಿರಪ್ಪೆ ಸಿನಿಮಾದಲ್ಲಿ ಶಶಿಕುಮಾರ್, ಸಮುದ್ರಕಣಿ, ಕಲೈ ಅರಸನ್ ಮತ್ತು ಸೂರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.