ಮರಿಟೈಗರ್ ವಿನೋದ್ ಪ್ರಭಾಕರ್ ಸದ್ಯಕ್ಕೆ 'ರಗಡ್' ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಚಿತ್ರ ಅವರಿಗೆ ಬ್ರೇಕ್ ನೀಡಿದ್ದು ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬರುತ್ತಿವೆ.
ಸದ್ಯಕ್ಕೆ ವಿನೋದ್ ಪ್ರಭಾಕರ್ ಉದಯ್ ಪ್ರಕಾಶ್ ನಿರ್ದೇಶಿಸುತ್ತಿರುವ 'ವರ್ಧ' ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಇಂದು ಚಿತ್ರದ ಆ್ಯಕ್ಷನ್ ದೃಶ್ಯವೊಂದನ್ನು ಚಿತ್ರೀಕರಿಸುವ ವೇಳೆ ವಿನೋದ್ ಎಡಕಾಲಿಗೆ ಪೆಟ್ಟಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಟಿಂಬರ್ ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.
ಕೂಡಲೇ ವಿನೋದ್ ಮಾಗಡಿ ರಸ್ತೆಯ ಆರ್ಥೋಕೇರ್ ಆಸ್ಪತ್ರೆಗೆ ತೆರಳಿ ನೋವಿಗೆ ಚಿಕಿತ್ಸೆ ಪಡೆದಿದ್ದಾರೆ. ಎಡಗಾಲಿನ ಮಂಡಿ ಮೂಳೆಯಲ್ಲಿ ಏರ್ಕ್ಯ್ರಾಕ್ ಆಗಿದ್ದು ಸ್ವಲ್ಪ ದಿನಗಳ ಮಟ್ಟಿಗೆ ಬೆಡ್ ರೆಸ್ಟ್ ಮಾಡಲು ವೈದ್ಯರು ಸೂಚಿಸಿದ್ದಾರೆ. ಆದರೂ ವಿನೋದ್ ಚಿಕಿತ್ಸೆ ಪಡೆದು ಅಲ್ಲಿಂದ ನೇರವಾಗಿ ಶೂಟಿಂಗ್ಗೆ ತೆರಳಿದ್ದಾರೆ ಎಂದು ಅವರ ಪತ್ನಿ ನಿಶಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.