ದಿನೇ ದಿನೆ ತಾಪಮಾನ ಏರುತ್ತಿದೆ. ಬಿಸಿಲಿನ ಝಳಕ್ಕೆ ನೀರು ಕೂಡಾ ಹೆಚ್ಚಿಗೆ ಬಳಕೆಯಾಗುತ್ತಿದೆ. ಪ್ರತಿ ಕೆಲಸಕ್ಕೂ ಜೀವಜಲ ಅತ್ಯವಶ್ಯಕ. ಆದರೆ ಎಷ್ಟೋ ಕಡೆ ಕಿಲೋ ಮೀಟರ್ಗಟ್ಟಲೆ ನಡೆದು ನೀರನ್ನು ಹೊತ್ತು ಬರುವ ಪರಿಸ್ಥಿತಿ ಇದೆ. ಇನ್ನೂ ಕೆಲವೆಡೆ ನೀರನ್ನು ವ್ಯರ್ಥ ಮಾಡಲಾಗುತ್ತದೆ.
ನೀರನ್ನು ಮಿತವಾಗಿ ಬಳಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳು ಜರುಗುತ್ತವೆ. ಇದೀಗ ಹಿರಿಯ ನಟ ಎಸ್.ಬಿ. ಬಾಲಸುಬ್ರಹ್ಮಣ್ಯಂ ಕೂಡಾ ನೀರನ್ನು ಮಿತವಾಗಿ ಬಳಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ 'ಲೂಪ್' ಹೆಸರಿನ ಹೈಟೆಕ್ ಸ್ಟುಡಿಯೋ ಉದ್ಘಾಟನೆಗೆ ಬಂದಿದ್ದ ಬಾಲಸುಬ್ರಹ್ಮಣ್ಯಂ, ಸ್ಟುಡಿಯೊ ಉದ್ಭಾಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
'ಪ್ರತಿದಿನ ನಾವೇ ನಮ್ಮ ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ನೀರನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ನಮ್ಮ ಪ್ರತಿನಿತ್ಯದ ಬಳಕೆಯಲ್ಲಿ ಒಂದು ಹನಿ ನೀರು ವ್ಯರ್ಥ ಆಗದಂತೆ ನೋಡಿಕೊಳ್ಳಬೇಕು. ಒಂದು ಹನಿ ನೀರು ಪೋಲಾದರೂ ಮುಂದಿನ ದಿನಗಳಲ್ಲಿ ಇಡೀ ವಿಶ್ವವೇ ಪಶ್ಚಾತಾಪ ಪಡಬೇಕಾಗುತ್ತದೆ. ಗಾಳಿ ನೀರು ಪ್ರಕೃತಿ ಮೇಲೆ ಪ್ರತಿಯೊಬ್ಬರಿಗೂ ಹಕ್ಕಿದೆ. ಅದ್ದರಿಂದ ನೀರನ್ನು ತುಂಬಾ ಮುತುವರ್ಜಿ ವಹಿಸಿ ರಕ್ಷಿಸಿಕೊಳ್ಳಬೇಕಿದೆ. ಪ್ರಕೃತಿ ಬಗ್ಗೆ ನಾವೆಲ್ಲಾ ಬಹಳ ಜಾಗೃತರಾಗಿರಬೇಕು. ಅದನ್ನು ನಾವು ಭಗವಂತನ ರೀತಿ ಕಾಪಾಡಿಕೊಳ್ಳಬೇಕು ಎಂದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮನವಿ ಮಾಡಿದ್ದಾರೆ.