ಹಿರಿಯ ನಟ, ಬರಹಗಾರ, ನಿರ್ದೇಶಕ, ರಂಗಭೂಮಿ ಹಾಗೂ ಕಿರುತೆರೆ ನಟ ಶಿವರಾಮ್ ಪುಟ್ಟಣ್ಣ ಕಣಗಾಲ್ ಅವರ ಕಾಲದಿಂದಲೂ ಇಂದಿನವರೆಗೂ ಬಹುತೇಕ ಎಲ್ಲ ನಾಯಕರೊಂದಿಗೆ ನಟಿಸಿದ್ದಾರೆ. ಈ ಹಿರಿಯ ನಟ 'ದೇವರು ಬೇಕಾಗಿದ್ದಾರೆ' ಸುದ್ದಿಗೋಷ್ಠಿಯಲ್ಲಿ ತಮ್ಮ ಮನಸ್ಸಿನಲ್ಲಿದ್ದ ಬೇಸರದ ಮಾತುಗಳನ್ನು ಹೊರಹಾಕಿದ್ದಾರೆ.
ಪುಟ್ಟಣ್ಣ ಕಣಗಾಲ್ ಜೊತೆ 'ಗೆಜ್ಜೆಪೂಜೆ' ಸಿನಿಮಾದಲ್ಲಿ ಶಿವರಾಮ್, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಊಟದ ಎಲೆ ತೆಗೆಯುವ ವ್ಯಕ್ತಿ ಸಮಯಕ್ಕೆ ಸರಿಯಾಗಿ ಬಾರದೇ ಇದ್ದಾಗ ನನ್ನ ಕೆಲಸ ಅಲ್ಲದಿದ್ದರೂ ನಾನು ಎಲ್ಲರು ತಿಂದ ಎಲೆಯನ್ನು ತೆಗೆದಿದ್ದೇನೆ. ಇಂತಹ ಕೆಲಸಗಳನ್ನು ಮಾಡಿಕೊಂಡೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಇಂದು ನಾನು ದೊಡ್ಡ ದೊಡ್ಡ ನಾಯಕರ ಸಿನಿಮಾದಲ್ಲಿ ನಟಿಸುವ ಯೋಗ್ಯತೆಯನ್ನೇ ಕಳೆದುಕೊಂಡಿದ್ದೇನೆ ಎಂದು ಶಿವರಾಮಣ್ಣ ಹೇಳಿದ್ದರಲ್ಲಿ ಬೇರೆ ಅರ್ಥವೇ ಅಡಗಿದೆ ಎಂದು ಹೇಳಬೇಕಿಲ್ಲ. ಶಿವರಾಮ್ ಅವರಿಗೆ ಈಗ 81 ವರ್ಷ ವಯಸ್ಸು. 8 ವರ್ಷದ ಅನೂಪ್ ಜೊತೆ 'ದೇವರು ಬೇಕಾಗಿದ್ದಾರೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಹೊಸ ಆಯಾಮದ ಕಥೆಗಳು, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಶಿವರಾಮ್ ಯಾರ ಜೊತೆಗೂ ಸಂಭಾವನೆ ಬಗ್ಗೆ ಮಾತನಾಡುವುದಿಲ್ಲವಂತೆ. ನನಗೆ ಸಂಭಾವನೆ ಕಟ್ಟುವವರು ಇರುವಾಗ ನಾನೇಕೆ ಅದರ ಬಗ್ಗೆ ಯೋಚಿಸಲಿ ಎನ್ನುತ್ತಾರೆ ಅವರು. ಎಷ್ಟೋ ವೇಳೆ ಸಿನಿಮಾ ಗೆದ್ದ ಮೇಲೆ ನನ್ನ ಸಂಭಾವನೆ ಕೊಡಿ ಎಂದು ಹೇಳಿದ್ದೇನೆ ಎಂದು ಅಸಹಾಯಕತೆಯನ್ನು ಹೊರಹಾಕಿದರು.
ಇನ್ನು ಡಬ್ಬಿಂಗ್ ಬಗ್ಗೆಯೂ ಮಾತನಾಡಿದ ಅವರು, ಡಬ್ಬಿಂಗ್ ಸಿನಿಮಾಗಳು ಕನ್ನಡಕ್ಕೆ ಒಗ್ಗುವುದಿಲ್ಲ ಎಂಬುದನ್ನು ಇಲ್ಲಿಯವರು ಅರ್ಥ ಮಾಡಿಕೊಳ್ಳಬೇಕು. ನೂರಾರು ಸಿನಿಮಾಗಳು ಡಬ್ ಆಗಲು ಸಾಲಿನಲ್ಲಿ ನಿಂತಿವೆ. ಆದರೆ, ಡಬ್ಬಿಂಗ್ ಸಿನಿಮಾಗಳಿಂದ ಯಾವುದೇ ವ್ಯಾಪಾರ ನಡೆಯುತ್ತಿಲ್ಲ ಎಂದು ತಿಳಿದರೂ ಮುನ್ನುಗ್ಗುವುದು ಅವರ ವಿವೇಕಕ್ಕೆ ಬಿಟ್ಟಿದ್ದು ಎಂಬುದು ಶಿವರಾಮ್ ಅವರ ಅಭಿಪ್ರಾಯ.