ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಜನರಿಗೆ ಒಂದು ಕೆಟ್ಟಸುದ್ದಿ ಶಾಕ್ ನೀಡಿತ್ತು. 'ಕರ್ನಾಟಕದ ಕುಳ್ಳ' ಎಂದೇ ಹೆಸರಾದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ ಎಂದು ಕೇಳಿದ ಜನರು ಸ್ವಲ್ಪ ಸಮಯ ಬೇಸರದಲ್ಲಿದ್ದರು. ಆದರೆ ಅದು ಸುಳ್ಳುವದಂತಿ ಎಂದು ತಿಳಿದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.
ಕಳೆದ ರಾತ್ರಿಯಿಂದ ವಾಟ್ಸ್ಆ್ಯಪ್ನಲ್ಲಿ ಈ ರೀತಿ ಸುಳ್ಳು ಮೆಸೇಜ್ಗಳು ಹರಿದಾಡುತ್ತಿದ್ದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್ಗಳು ಬಂದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತ: ದ್ವಾರಕೀಶ್ ಅವರೇ ಇತಿಶ್ರೀ ಹಾಡಿದ್ದಾರೆ. ದ್ವಾರಕೀಶ್ ಆರೋಗ್ಯವಾಗಿದ್ದಾರೆ, ಎಂದಿನಂತೆ ಮನೆಯಲ್ಲಿ ಇಂದು ದೇವರ ಪೂಜೆ ಮಾಡಿದ್ದಾರೆ.
ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಕ್ಕೂ ಸುಳ್ಳು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಸ್ವತ: ದ್ವಾರಕೀಶ್ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. 'ನಾನು ನಿಮ್ಮ ಕರ್ನಾಟಕದ ಕುಳ್ಳ ದ್ವಾರಕೀಶ್, ಹುಷಾರಾಗಿದ್ದೀನಿ. ನಿನ್ನೆಯಿಂದ ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಕಿವಿ ಕೊಡಬೇಡಿ. ನಾನು ಆರೋಗ್ಯವಾಗಿದ್ದೀನಿ, ಆರೋಗ್ಯವಾಗಿರ್ತೀನಿ ನಿಮ್ಮೆಲ್ಲರ ಆಶೀರ್ವಾದ, ರಾಯರ ಕೃಪೆಯಿಂದ ನಾನು ಹುಷಾರಾಗಿದ್ದೀನಿ. ಆ ರೀತಿ ಏನೇ ಆದರೂ ಅದು ನಿಮಗೆ ಗೊತ್ತಾಗುತ್ತೆ. ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಸಂದೇಶ ರವಾನಿಸಿದ್ದಾರೆ.