2018 ರಲ್ಲಿ 'ತಾರಕಾಸುರ' ಆಗಿ ಮಿಂಚಿದ್ದ ನಟ ವೈಭವ್ ಇಂದು ‘ಕೈಲಾಸ’ ಕ್ಕೆ ಹೊರಟಿದ್ದಾರೆ. ಕನ್ಫ್ಯೂಸ್ ಆಗಬೇಡಿ, ವೈಭವ್ 'ಕೈಲಾಸ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿರಿಯ ಪ್ರದರ್ಶಕ ನರಸಿಂಹುಲು ಅವರ ಪುತ್ರ ವೈಭವ್ ಅಭಿನಯದ ‘ಕೈಲಾಸ’ ಸೆಟ್ಟೇರಿದೆ. ಡಾಲಿ ಧನಂಜಯ್ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಬದುಕಿನ ಅರ್ಥ ತಿಳಿದುಕೊಳ್ಳದ ಯುವಕ ಹಾಗೂ ಜವಾಬ್ದಾರಿ ಇರುವ ಹುಡುಗಿಯ ನಡುವೆ ಆಗುವ ಸಂಘರ್ಷ ಈ ಚಿತ್ರದ ಕಥಾ ವಸ್ತು. ಪ್ರೀತಿಯಲ್ಲಿ ಸಫಲನಾಗಲು ನಾಯಕ ಏನೇನು ಮಾಡುತ್ತಾನೆ ಎಂಬುದನ್ನು ಕೂಡಾ ಚಿತ್ರದಲ್ಲಿ ತೋರಿಸಲಾಗಿದೆ. ನಾಗ್ ವೆಂಕಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗ್ ವೆಂಕಟ್ ವೃತ್ತಿಯಲ್ಲಿ ಟೆಕ್ಕಿ . ಇದಕ್ಕೂ ಮುನ್ನ ಎರಡು ಕಿರುಚಿತ್ರಗಳನ್ನು, ವೆಬ್ ಸೀರೀಸ್ಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ. ಇದೀಗ 'ಕೈಲಾಸ' ನಿರ್ದೇಶನಕ್ಕೆ ಇಳಿದಿದ್ದಾರೆ. ಬೆಂಗಳೂರು ಸುತ್ತಮುತ್ತ, ತೀರ್ಥಹಳ್ಳಿ, ಕೊಡಗು ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ.
ವೈಭವ್ಗೆ ಮಂಗಳೂರಿನ ರಾಶಿ ಬಾಲಕೃಷ್ಣ ನಾಯಕಿನಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ಖ್ಯಾತ ನಟ ಕೂಡಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದ್ದು ಆ ನಟ ಯಾರು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಚಿತ್ರದ ಹಾಡುಗಳಿಗೆ ಆಶಿಕ್ ಅರುಣ್ ರಾಗ ಸಂಯೋಜಿಸಿದ್ದಾರೆ. ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ತ್ಯಾಗು ಸಂಕಲನ, ಸ್ಟನ್ನರ್ ಶ್ಯಾಮ್ ಸಾಹಸ ನಿರ್ದೇಶನ ಮಾಡಿದ್ದಾರೆ. ಅನಂತಪುರದ ಉದ್ಯಮಿ ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವಾಸಿಕ್ ಆಲ್ ಸಾದ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.